ಉಡುಪಿ, ಮೇ04(Daijiworld News/SS): ಒಡಿಶಾದ ಪುರಿ ಸಹಿತ ಹಲವೆಡೆ ಫೋನಿ ಚಂಡಮಾರುತದ ಪರಿಣಾಮ ಉಂಟಾಗಿದೆ. ಈ ಚಂಡಮಾರುತ ಈಶಾನ್ಯ ದಿಕ್ಕಿನತ್ತ ಸಾಗುತ್ತಿರುವುದರಿಂದ ದಕ್ಷಿಣ ಕರಾವಳಿ ಭಾಗಕ್ಕೆ ಯಾವುದೇ ಆತಂಕ ಇಲ್ಲ ಎಂದು ಹೇಳಲಾಗಿದ್ದರೂ, ಕರಾವಳಿಯ ಉಭಯ ಜಿಲ್ಲೆಗಳಲ್ಲಿನ ಮೀನುಗಾರರಿಗೆ ಎಚ್ಚರಿಕೆಯಿಂದಿರಲು ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾ ರಾಜ್ಯದಲ್ಲಿರುವ ಫೋನಿ ಚಂಡಮಾರುತ ಪ್ರಭಾವ ದಕ್ಷಿಣ ಕರಾವಳಿ ಭಾಗದಲ್ಲಿ ಅಷ್ಟೇನೂ ಪರಿಣಾಮ ಬೀರದಿದ್ದರೂ, ಸಮುದ್ರದಲ್ಲಿ ಅಲೆಗಳ ಅಬ್ಬರದಲದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗಿತ್ತು. ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಮರವಂತೆ, ತ್ರಾಸಿ, ಬೈಂದೂರಿನ ಸೋಮೇಶ್ವರ ಕಡಲ ಆಳದಲ್ಲಿ ಅಲೆಗಳ ಅಬ್ಬರ ಜೋರಾಗಿಯೇ ಇತ್ತು ಎಂದು ಹೇಳಲಾಗಿದೆ.
ಬಂಗಾಲಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಫೋನಿ ಚಂಡಮಾರುತ ಈಶಾನ್ಯ ದಿಕ್ಕಿನತ್ತ ಸಾಗುತ್ತಿರುವುದರಿಂದ ದಕ್ಷಿಣ ಕರಾವಳಿಗೆ ಯಾವುದೇ ಆತಂಕ ಇಲ್ಲ ಎನ್ನುವ ಮುನ್ಸೂಚನೆ ಸಿಕ್ಕಿದ್ದು, ಉಭಯ ಜಿಲ್ಲೆಗಳಲ್ಲಿ ಮೀನುಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಆದರೂ ಎಚ್ಚರಿಕೆಯಿಂದಿರಲು ಮೀನುಗಾರರಿಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆ ಸೂಚನೆ ನೀಡಿದೆ.
ಗುರುವಾರವೂ ಗಂಗೊಳ್ಳಿ, ಶಿರೂರು, ಮಲ್ಪೆ, ಹೆಜಮಾಡಿ, ಮಂಗಳೂರು ಸಹಿತ ಎಲ್ಲ ಕಡೆಗಳಲ್ಲಿಯೂ ಬೋಟುಗಳು ಮತ್ತು ದೋಣಿಗಳು ಮೀನುಗಾರಿಕೆಗೆ ತೆರಳಿವೆ. ಆದರೆ ಈಗ ಮೀನು ಸಿಗುವ ಪ್ರಮಾಣ ಕಡಿಮೆಯಾಗಿರುವುದರಿಂದ ಹೆಚ್ಚಿನ ಬೋಟುಗಳು, ದೋಣಿಗಳು ದಡದಲ್ಲೆ ಇವೆ.