ಕಾಸರಗೋಡು, ಮೇ04(Daijiworld News/SS): ಶ್ರೀಲಂಕಾದಲ್ಲಿ ಸರಣಿಸ್ಫೋಟ ಸಂಭವಿಸಿದ ಬಳಿಕ ಗುಪ್ತಚರ ವಿಭಾಗ ನೀಡಿದ ಮಾಹಿತಿ ಮೇರೆಗೆ ಕಾಸರಗೋಡು ಸಹಿತ ಕೇರಳದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ಶ್ರೀಲಂಕಾದಲ್ಲಿ ಸರಣಿಸ್ಫೋಟಕ್ಕೆ ಸಂಬಂಧಿಸಿ ಎನ್ಐಎ ಕೇರಳದಲ್ಲಿ ನಡೆಸಿದ ತನಿಖೆಯಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ನೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಬಂಧಿತನಾದ ಪಾಲಕ್ಕಾಡ್ ನಿವಾಸಿ ರಿಯಾಸ್ ಅಬೂಬಕ್ಕರ್ ನೀಡಿದ ಮಾಹಿತಿಯನ್ವಯ ರಾಜ್ಯಾದ್ಯಂತ ತಪಾಸಣೆ ಚುರುಕುಗೊಳಿಸಲಾಗಿದೆ.
ರಾಜ್ಯದ ಜನಸಂದಣಿಯಿರುವ ಆರಾಧನಾಲಯ, ಪ್ರವಾಸಿ ತಾಣಗಳು, ರೈಲ್ವೆ ನಿಲ್ದಾಣಗಳನ್ನು ಕೇಂದ್ರೀಕರಿಸಿ ಸ್ಫೋಟ ನಡೆಸುವ ಯೋಜನೆಯನ್ನು ಐಸಿಸ್ ಭಯೋತ್ಪಾದಕರು ಹೊಂದಿದ್ದರು ಎಂಬ ಅಂಶವನ್ನು ರಿಯಾಸ್ ಅಬೂಬಕ್ಕರ್ ಬಹಿರಂಗಪಡಿಸಿದ್ದನು.
ರೈಲುಗಳಲ್ಲಿ ಸ್ಫೋಟಕ ಸಾಮಗ್ರಿ ಸಾಗಿಸುವ ಸಾಧ್ಯತೆಯಿರುವುದಾಗಿ ಗುಪ್ತಚರ ವಿಭಾಗ ನೀಡಿತ್ತು. ಈ ಮಾಹಿತಿಯ ಮೇರೆಗೆ ಕಾಸರಗೋಡು ಸಹಿತ ಕೇರಳದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ರೈಲ್ವೆ ಭದ್ರತಾ ಪಡೆ, ರೈಲ್ವೆ ಪೊಲೀಸ್ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ರೈಲುಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಸ್ಫೋಟಕ ವಸ್ತುಗಳ ತಪಾಸಣೆಗಾಗಿ ಹೆಚ್ಚಿನ ತರಬೇತಿ ಪಡೆದ ಕ್ವಾಮಿ ಮತ್ತು ಗೌರಿ ಹೆಸರಿನ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ರೈಲಲ್ಲಿರುವ ಎಲ್ಲ ಸಾಮಗ್ರಿಗಳನ್ನು ಮೆಟಲ್ ಡಿಟೆಕ್ಟರ್, ಶ್ವಾನ ದಳದ ಮೂಲಕ ತಪಾಸಣೆಗೊಳಪಡಿಸಲಾಗುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುವವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.