ಮಂಗಳೂರು, ಮೇ04(Daijiworld News/SS): ಕದ್ರಿ ಶ್ರೀ ಮಂಜುನಾಥ ಹಾಗೂ ಪರಿವಾರ ದೇವರಿಗೆ 1,008 ಬ್ರಹ್ಮಕಲಶಾಭಿಷೇಕ ಹಾಗೂ ಮಹಾದಂಡರುದ್ರಾಭಿಷೇಕ ಮಹೋತ್ಸವವು ಮೇ 2ರಿಂದ ಭಕ್ತಿ ಶ್ರದ್ಧೆಯಿಂದ ಆರಂಭಗೊಂಡು, ಮೇ 10ರವರೆಗೆ ಶ್ರೀ ರಾಜಾನಿರ್ಮಲನಾಥ್ ಜೀ ಅವರ ಉಪಸ್ಥಿತಿಯಲ್ಲಿ ದೇರೆಬೈಲು ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರೇಣ್ಯರ ನೇತೃತ್ವದಲ್ಲಿ ನೆರವೇರಲಿದೆ.
ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾ ದಂಡರುದ್ರಾಭಿಷೇಕ ಹಿನ್ನೆಲೆಯಲ್ಲಿ, ಕ್ಷೇತ್ರಕ್ಕೆ ಹಸಿರು ಹೊರೆ ಕಾಣಿಕೆ ಹರಿದು ಬರುತ್ತಿದೆ.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜರುಗಲಿರುವ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ - ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರ ಯಾಗದ ಪ್ರಯುಕ್ತ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 100 ಕ್ವಿಂಟಲ್ ಅಕ್ಕಿ ಸಹಿತ ಹಸಿರು ಹೊರೆ ಕಾಣಿಕೆಯನ್ನು ಕಳುಹಿಸಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಮಾತ್ರವಲ್ಲ, ಶ್ರೀ ಸ್ವಾಮಿ ಮಂಜುನಾಥನಿಗೆ ನಡೆಯುವ ವೈಭವದ 1,008 ಬ್ರಹ್ಮಕಲಶಾಭಿಷೇಕ ಹಾಗೂ ಮಹಾದಂಡರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಆಗಮಿಸಿ, ದೇವರ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.
ಬ್ರಹ್ಮಕಶಾಭಿಷೇಕದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಹೊರಭಾಗದಲ್ಲಿ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ಗೆ ಕದ್ರಿ ಕ್ರೀಡಾಂಗಣ ಹಾಗೂ ಇತರ ಮೂರು ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದೇವಾಲಯವನ್ನು ವಿದ್ಯುದ್ದೀಪಾಲಂಕಾರದಿಂದ ಅಲಂಕರಿಸಲಾಗಿದೆ.