ಕುಂದಾಪುರ, ಮೇ 04 (Daijiworld News/MSP): ಗ್ಯಾಸ್ ಸಿಲಿಂಡರ್ ಹೊತ್ತೊಯ್ದು ಎಟಿಎಂ ಕೋಣೆಯೊಳಗೆ ಇರಿಸಿ ಬಳಿಕ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಮೆಶಿನ್ನಿಂದ ಹಣ ಲಪಟಾಯಿಸಲು ಯತ್ನಿಸಿ ವಿಫಲವಾದ ಘಟನೆ ಬೈಂದೂರಿನ ಕೆನರಾ ಬ್ಯಾಂಕ್ ಸಮೀಪದ ಎಟಿಎಂನಲ್ಲಿ ಮೇ 3 ರ ಶುಕ್ರವಾರ ತಡರಾತ್ರಿ ನಡೆದಿದೆ.
ಬೈಂದೂರಿನ ಜ್ಯೂನಿಯರ್ ಕಾಲೇಜು ಸಮೀಪ ಕೆನರಾ ಬ್ಯಾಂಕ್ ಇದ್ದು ಅದರ ಸಮೀಪವೇ ಕೆನರಾ ಬ್ಯಾಂಕ್ ಎಟಿಎಂ ಇದೆ. ತಡರಾತ್ರಿಯಲ್ಲಿ ಗ್ಯಾಸ್ ಸಿಲಿಂಡರ್ ವೊಂದನ್ನು ದುಷ್ಕರ್ಮಿಗಳು ತೆಗೆದುಕೊಂಡು ಬಂದಿದ್ದು, ಗ್ಯಾಸ್ ಕಟ್ಟರ್ ಮೂಲಕ ಎಟಿಎಂ ಮೆಶಿನ್ನ ಮೇಲ್ಭಾಗವನ್ನು ಕತ್ತರಿಸಿದ್ದಾರೆ. ಆದರೆ ಒಳಭಾಗದಲ್ಲಿ ಮತ್ತೊಂದು ಬಲಿಷ್ಟವಾದ ಉಕ್ಕಿನ ಪದರವಿದ್ದುದರಿಂದ ದುಷ್ಕರ್ಮಿಗಳಿಗೆ ನಿರೀಕ್ಷಿಸಿದಷ್ಟು ಸುಲಭವಾಗಿ ಮೆಶಿನ್ ಒಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಇದೇ ಸಂದರ್ಭ ರಸ್ತೆಯಲ್ಲಿ ಕೆಲವರು ಬಂದಿದ್ದು, ಇದರಿಂದ ಗಾಬರಿಗೊಂಡ ದುಷ್ಕರ್ಮಿಗಳು ಗ್ಯಾಸ್ ಸಿಲಿಂಡರನ್ನೂ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆನರಾ ಬ್ಯಾಂಕ್ ಎಟಿಎಂ ಒಳಗೆ ಸಿಸಿ ಕ್ಯಾಮರಾ ಇಲ್ಲವೇ ಎನ್ನುವ ಅನುಮಾನಗಳೂ ಕೆಲವರಲ್ಲಿ ಕಾಡುತ್ತಿದೆ.