ಮಂಗಳೂರು,ಮೇ 04 (Daijiworld News/MSP): ಕಾಲೇಜು ಪ್ರಾಂಶುಪಾಲರ ಕೈಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಬೆಂಗಳೂರಿನ ಶಿಕ್ಷಣ ಇಲಾಖೆಯ ಅಧಿಕಾರಿ ಲೋಕೇಶ್ ಎ.ಎಮ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.
ಘಟನೆಯ ವಿವರ:
ಕರ್ನಾಟಕ ಸರಕಾರದ ಆಡಿಟ್ ಆ್ಯಂಡ್ ಅಕೌಂಟ್ಸ್ ವಿಭಾಗದ ಅಸಿಸ್ಟೆಂಟ್ ಅಕೌಂಟ್ ಆಫೀಸರ್ ಆಗಿದ್ದ ಬೆಂಗಳೂರಿನ ಲೋಕೇಶ್ ಎ.ಎಮ್ (50) ಅವರು ಸುರತ್ಕಲ್ ನಲ್ಲಿ ಕಾಲೇಜು ಪ್ರಾಂಶುಪಾಲರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಈ ಸಂದರ್ಭ ಲಂಚ ಪಡೆದ 2.50 ಲಕ್ಷ ರೂಪಾಯಿ ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು
ಪುತ್ತೂರು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದು, ಅವರಿಗೆ ಆಡಿಟ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕಿತ್ತು. ಆದರೆ ಅದನ್ನು ನೀಡಬೇಕಾದರೆ 2.50 ಲ.ರೂ. ಲಂಚ ನೀಡ ಬೇಕೆಂದು ಲೋಕೇಶ್ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಪ್ರಾಂಶುಪಾಲರು ಎಸಿಬಿಗೆ ದೂರು ನೀಡಿದ್ದರು.
ಬಳಿಕ ಅಧಿಕಾರಿಗಳು ನೀಡಿದ್ದ ಸೂಚನೆಯಂತೆ, ಲಂಚದ ಹಣ ನೀಡುವುದಾಗಿ ಹೇಳಿದ ಪ್ರಾಂಶುಪಾಲರು ಅಧಿಕಾರಿ ಲೋಕೇಶ್ ಅವರನ್ನು ಮಂಗಳೂರಿಗೆ ಬರುವಂತೆ ಹೇಳಿದ್ದರು. ಅದರಂತೆ ಲೋಕೇಶ್ ತನ್ನ ಖಾಸಗಿ ವಾಹನದಲ್ಲಿ ಏಪ್ರಿಲ್ ೨೬ ರ ಶುಕ್ರವಾರ ಬೆಂಗಳೂರಿನಿಂದ ಬಂದು ಸುರತ್ಕಲ್ಲಿನ ಹೊಟೇಲ್ ನಲ್ಲಿ ತಂಗಿದ್ದರು. ಮಧ್ಯಾಹ್ನ ವೇಳೆ ಕಾಲೇಜು ಪ್ರಾಂಶುಪಾಲರು ಹೊಟೇಲ್ ಗೆ ತೆರಳಿದ್ದು, ಆರೋಪಿ 2.50 ಲ. ರೂ.ಲಂಚದ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿದ್ದರು.
ಈ ಹಿನ್ನಲೆಯಲ್ಲಿ ಆರೋಪಿ ಲೋಕೇಶ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ್ ಪೈ, ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ .
ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪರ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ವಾದಿಸಿದ್ದರು.