ಮೂಡುಬಿದಿರೆ ನ19: ಹಾಡು ಹಗಲೇ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ನ 19 ರವಿವಾರ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉರ್ಕಿ ಬಡಗ ಎಡಪದವು ಗ್ರಾಮದ ಲೋಕೇಶ್ ಶೆಟ್ಟಿಗಾರ್ (19) ಎಂದು ಗುರುತಿಸಲಾಗಿದೆ. ಈತ ಬೀಗ ಹಾಕಿದ ಹಲವು ಮನೆಗಳಲ್ಲಿ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಮನೆಕಳ್ಳತನದಲ್ಲಿ ಭಾಗಿಯಾಗಿದ್ದ. ಬಂಧಿತನಿಂದ 221 ಗ್ರಾಂ ಚಿನ್ನದ ಆಭರಣಗಳು, 10 ಮೊಬೈಲ್ ಫೋನ್ , ಒಂದು ಬೈಕ್ ಹೀಗೆ ಒಟ್ಟು 7 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಉಮಾ ಪ್ರಶಾಂತ್ ಹಾಗೂ ಎ.ಸಿ.ಪಿ ರಾಜೇಂದ್ರ ಡಿ.ಎಸ್ ಮಾರ್ಗದರ್ಶನದಲ್ಲಿ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ಹಾಗೂ ಠಾಣಾ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.