ಬೆಳ್ತಂಗಡಿ, ಮೇ05 (DaijiworldNews/SM): ಎಚ್ಪಿಸಿಎಲ್ ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿದ್ದ ನೌಕರರನ್ನು ಕೆಲಸದಿಂದ ತೆಗೆದು ಹಾಕುವುದರ ವಿರುದ್ದ ಆದಿತ್ಯವಾರ ಪ್ರತಿಭಟನೆ ನಡೆಯಿತು. ಕಳಿಯ, ಕೊಯ್ಯೂರು, ನೆರಿಯ, ಧರ್ಮಸ್ಥಳದ ಎಚ್ಪಿಸಿಎಲ್ ಕಂಪೆನಿಯಲ್ಲಿ ಕೆಲಸಕ್ಕಿರುವವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಚ್ಪಿಸಿಎಲ್ ನವರು ಗ್ಯಾಸ್ಪೈಪ್ ಲೈನ್ ಹಾದು ಹೋಗಲು ಬೆಳ್ತಂಗಡಿ ತಾಲೂಕಿನ ಅದೆಷ್ಟೋ ಜನರ ಕೃಷಿ ಭೂಮಿಯನ್ನು ವಶಪಡಿಸಿಕೊಂಡ ಕಂಪೆನಿ ಜಾಗದ ಮಾಲೀಕರಿಗೆ ಉದ್ಯೋಗದ ಭರವಸೆ ನೀಡಿತ್ತು. ನೀಡಿದ ಭರವಸೆಯಂತೆ ಜಾಗದ ಮಾಲಕರಿಗೆ ಸೆಕ್ಯುರಿಟಿ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ನೀಡಿ ಕೈ ತೊಳೆದುಕೊಂಡಿತ್ತು. ಇತ್ತ ಕೃಷಿ ಭೂಮಿಯೂ ಇಲ್ಲದೆ ಕಂಗಾಲಾಗಿದ್ದ ರೈತ ಬೇರೆ ದಾರಿ ಕಾಣದೆ ಕೊಟ್ಟ ಕೆಲಸವನ್ನು ನಿಯತ್ತಿನಿಂದ ಮಾಡಿಕೊಂಡಿದ್ದ.
ಆದರೆ, ಕೆಲವು ತಿಂಗಳ ಹಿಂದೆ, ತನ್ನ ಕ್ಷೇತ್ರದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಕೆಲಸವನ್ನು ಕೊಡಲೇಬೇಕೆಂಬ ಕ್ಷೇತ್ರದ ಶಾಸಕರ ಒತ್ತಾಯಕ್ಕೆ ಮಣಿದ ಕಂಪೆನಿ ಸಮ್ಮತಿ ಸೂಚಿಸಿತ್ತು. ಆದರೆ ಬೆಳ್ತಂಗಡಿಯಿಂದ ಮಂಗಳೂರಿಗೆ ಹೋದ ಅವರು ಮಾತು ಬದಲಾಯಿಸಿ ಶನಿವಾರ ಪೋಲಿಸರ ಮುಖಾಂತರ ಕಾರ್ಮಿಕರನ್ನು ಹೊರ ಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಿಮ್ಮ ಕೆಲಸದ ಗುತ್ತಿಗೆ ಮುಗಿದಿದೆ ನಿಮಗಿನ್ನು ಕೆಲಸವಿಲ್ಲ ಎಂದು ಯಾವುದೇ ಮುನ್ಸೂಚನೆ ನೀಡದೆ ತೆಗೆದು ಹಾಕಲು ಹೊರಟಿರುವುದರ ವಿರುದ್ದ ನೌಕರರು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾಹಿತಿ ಪಡೆದ ಶಾಸಕ ಹರೀಶ ಪೂಂಜ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದೇ ಆದಲ್ಲಿ ಕಾರ್ಮಿಕರೊಂದಿಗೆ, ಅವರ ಮನೆಯವರೊಂದಿಗೆ ಊರವರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.