ಮಂಗಳೂರು,ಮೇ 06 (Daijiworld News/MSP): ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳಿಂದ ತನಗೆ ಕಿರಿಕಿರಿಯಾಗುತ್ತಿದೆ ಎಂದು ನೆರೆಮನೆಯ ವ್ಯಕ್ತಿಯೊಬ್ಬ ಮಕ್ಕಳನ್ನು ಹಿಡಿದು ಚಾಕುವಿನಿಂದ ಚುಚ್ಚಿದ್ದ ಆಘಾತಕಾರಿ ಘಟನೆ ಮೇ 4 ಶನಿವಾರ ನಡೆದಿದೆ.
ನಗರದ ಶಕ್ತಿನಗರದ ಪ್ರೀತಿ ನಗರದಲ್ಲಿ ಈ ಘಟನೆ ನಡೆದಿದ್ದು ಘಟನೆಯಿಂದ ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ಈತ ಚಾಕುವಿನಿಂದ ಚುಚ್ಚಿದ್ದಾನೆ. ಆರೋಪಿಯನ್ನು ಶಕ್ತಿನಗರ ನಿವಾಸಿ ದೇವರಾಜು ಅಲಿಯಾಸ್ ಅಣ್ಣು (40) ಎಂದು ಗುರುತಿಸಲಾಗಿದ್ದು ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಚಾಕುವಿನಿಂದ ಚುಚ್ಚಿದ ಪರಿಣಾಮ ಗಾಯಗೊಂಡಿರುವ ಹಾರ್ದಿಕ್ (4) ಮತ್ತು ಚಿರಾಗ್ (9) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲೆಗೆ ರಜೆ ಇರುವ ಕಾರಣ ಹಾರ್ದಿಕ್ ತನ್ನ ತಮ್ಮ ಚಿರಾಗ್ ನೊಂದಿಗೆ ಹಾಗೂ ಉಳಿದ ಸ್ನೇಹಿತರೊಂದಿಗೆ ಮನೆಯ ಮುಂದೆ ಆಡುತ್ತಿದ್ದರು. ಆಗ ತನಗೆ ಕಿರಿಕಿರಿಯಾಗುತ್ತಿದೆ ಎಂದು ಹೇಳಿ ದೇವರಾಜು ಚೂರಿ ಹಿಡಿದುಕೊಂಡು ಮಕ್ಕಳ ಮೇಲೆ ಹಲ್ಲೆಗೆ ಮುಂದಾದ. ಆಗ ಉಳಿದ ಮಕ್ಕಳು ಭಯಗೊಂಡು ಓಡಿ ಹೋದರು. ಈ ಸಂದರ್ಭ ಕೈಗೆ ಸಿಕ್ಕ ಹಾರ್ದಿಕ್, ಚಿರಾಗ್ಗೆ ಆರೋಪಿ ಚೂರಿಯಿಂದ ಇರಿದಿದ್ದು, ಮಕ್ಕಳ ಕೈ, ತಲೆ ಹಾಗೂ ಮುಖಕ್ಕೆ ಗಾಯವಾಗಿದೆ.
ಮಕ್ಕಳ ಕಿರುಚಾಟ ಕೇಳಿ ಆಗಮಿಸಿದ ಪೋಷಕರು ಹಾಗೂ ಸ್ಥಳೀಯರು ಕೂಡಲೇ ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ಪೊಲೀಸರು ರವಿವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.