ಕಾಸರಗೋಡು,ಮೇ 06 (Daijiworld News/MSP): ಯುವ ಕಾಂಗ್ರೆಸ್ ಕಾರ್ಯಕರ್ತನ ಮನೆ ಮೇಲೆ ಬಾಂಬೆಸೆದ ಘಟನೆ ಮೇ. ೬ ರ ಸೋಮವಾರ ಮುಂಜಾನೆ ಪೆರಿಯದಲ್ಲಿ ನಡೆದಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ಕೊಲೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ರ ಸ್ನೇಹಿತ ದೀಪು ಕೃಷ್ಣ ಎಂಬವರ ಮನೆ ಮೇಲೆ ನಾಡ ಬಾಂಬ್ ಎಸೆಯಲಾಗಿದೆ. ಬಾಂಬ್ ದಾಳಿ ಪರಿಣಾಮ ಮನೆಯ ಗೋಡೆಗೆ ಹಾನಿ ಉಂಟಾಗಿದೆ.
ಶಬ್ದ ಕೇಳಿ ಮನೆಯವರು ಹೊರ ಬಂದು ನೋಡಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದರು . ಘಟನೆ ನಡೆದಾಗ ದೀಪು ಹಾಗೂ ಮನೆಯವರು ಮನೆಯಲ್ಲೇ ಇದ್ದರು.ಸಿಪಿಎಂ ಕಾರ್ಯಕರ್ತರು ಕೃತ್ಯ ನಡೆಸಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ . ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಫೆಬ್ರವರಿ 17 ರಂದು ರಾತ್ರಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈಯ್ಯಲಾಗಿತ್ತು . ಪ್ರಕರಣದಲ್ಲಿ ಸಿಪಿಎಂ ಸ್ಥಳೀಯ ಮುಖಂಡ ಸೇರಿ 11 ಮಂದಿಯನ್ನು ಬಂಧಿಸಲಾಗಿತ್ತು.