ಬಂಟ್ವಾಳ, ನ 20: ಇಲ್ಲಿನ ಪೇಟೆಯ ಪುರಸಭೆಯ ನಿರ್ವಹಣೆಯಲ್ಲಿರುವ ಬಾಗಿಲಿಲ್ಲದೆ ನಾದುರಸ್ತಿಯಲ್ಲಿದ್ದ ಬಡ್ಡಕಟ್ಟೆಯ ಸಾರ್ವಜನಿಕ ಶೌಚಾಲಯವು ಇದೀಗ ದುರಸ್ತಿ ಭಾಗ್ಯ ಕಾಣುತ್ತಿದೆ.
ಹೊರನೋಟಕ್ಕೆ ಒಂದು ಸುಂದರವಾದ ಆರ್ಸಿಸಿ ಕಟ್ಟಡದಂತಿದ್ದು, ಒಳಗೆ ಹೋದರೆ ಮೂಗು ಮುಚ್ಚಿ ವಾಪಾಸು ಬರಬೇಕಾದ ಸ್ಥಿತಿಯಲ್ಲಿ ಈ ಶೌಚಾಲಯವಿತ್ತು. ಇದೀಗ ಜನರ ಸಂಕಷ್ಟಕ್ಕೆ ಪುರಸಭೆ ಸ್ಪಂದಿಸಿದ್ದು. ಇಂದಿನಿಂದ ಕೆಲಸ ಪ್ರಾರಂಭ ಮಾಡಿದೆ.
ಒಂದು ಕಡೆ ಶೌಚಾಲಯಕ್ಕೆ ಬಾಗಿಲಿಲ್ಲ. ಒಳಗೆ ಹೋದರೆ ಕಸದಿಂದ ಕೆಸರು ತುಂಬಿದ ಕೊಮೋಡ್, ಮದ್ಯದ ಬಾಟ್ಲಿಗಳು, ಬಿಸ್ಲೆರಿ ಬಾಟ್ಲಿ, ಸಿಗರೇಟ್ ತುಂಡುಗಳು, ಹೀಗೆ ಯಾವುದು ಬೇಡ ಎಲ್ಲಾ ಈ ಶೌಚಾಲಯದಲ್ಲಿತ್ತು.
ಮೂತ್ರದೊಡ್ಡಿಯಲ್ಲಿ ಕೊಳಕು ತುಂಬಿದ್ದು ಗಬ್ಬು ವಾಸನೆ ಬರುತ್ತಿತ್ತು. ಬಾಟ್ಲಿಯ ಚೂರುಗಳು ನೆಲದಲ್ಲಿ ಹರಡಿಕೊಂಡಿತ್ತು. ಸಾಮಾನ್ಯ ಮನುಷ್ಯರಾದವರು ಅಲ್ಲಿ ಕಾಲಿಡುವುದು ಸಾಧ್ಯವಿರಲಿಲ್ಲ. ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿತ್ತು. ಒಂದು ವಾರದೊಳಗೆ ರಿಪೇರಿ ಮಾಡುವುದಾಗಿಯೂ ತಿಳಿಸಿದ್ದರು. ಇಂದಿನಿಂದ ಕೆಲಸ ಆರಂಭವಾಗಿದ್ದು ಶೌಚಾಲಯಕ್ಕೆ ಮುಕ್ತಿ ಸಿಕ್ಕಂತಾಗಿದೆ.