ಮಂಗಳೂರು,ಮೇ 06 (Daijiworld News/MSP): ಗ್ಯಾಸ್ ಸಿಲಿಂಡರ್ ಗಳನ್ನು ತುಂಬಿಕೊಂಡಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಇಳಿಜಾರಾದ ಬೃಹತ್ ಕಂದಕಕ್ಕೆ ಉರುಳಿ ಬಿದ್ದ ಘಟನೆ ಮೇ 6 ರ ಸೋಮವಾರ ಬೆಳಿಗ್ಗೆ ಪಜೀರು ಗ್ರಾಮದ ಅರ್ಕಾಣದ ಎಚ್ಪಿ ಗ್ಯಾಸ್ ಗೋದಾಮು ಬಳಿ ಸಂಭವಿಸಿದೆ.
ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಅವಘಡದ ನಡುವೆ ಲಾರಿಯೊಳಗಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.ಪಜೀರಿನ ಅರ್ಕಾಣದ ಬಳಿ ಇರುವ ಪಯಾಝ್ ಅವರಿಗೆ ಸೇರಿದ ಎಚ್ಪಿ ಎಲ್ಪಿಜಿ ಗೋದಾಮಿನ ಬಳಿ ಈ ಅಪಘಾತ ಸಂಭವಿಸಿದೆ. ಎಲ್ಪಿಜಿ ಗೊದಾಮಿನ ಎದುರು ಲಾರಿಯಲ್ಲಿ ಗ್ಯಾಸ್ ತುಂಬಿರುವ ಗ್ಯಾಸ್ ಸಿಲಿಂಡರ್ ನ್ನು ತುಂಬಲಾಗಿದ್ದು ಬೆಳಿಗ್ಗೆ ಕಾರಿನ ಚಾಲಕ ಖಾದರ್ ಎಂಬವರು ಲಾರಿಯನ್ನು ಗೋದಾಮಿನಿಂದ ಕೊಂಡೊಯ್ಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಗೋದಾನಿನ ಆವರಣಗೋಡೆಗೆ ಡಿಕ್ಕಿ ಹೊಡೆದು ಬಳಿಕ ಬೃಹತ್ ಕಂದಕಕ್ಕೆ ಉರುಳಿದೆ. ಈ ಸಂದರ್ಭದಲ್ಲಿ ಮರವೊಂದು ಅಡ್ಡ ಸಿಕ್ಕಿದ ಪರಿಣಾಮ ಲಾರಿ ಪಲ್ಟಿಯಾಗುವುದು ತಪ್ಪಿದೆ. ಈ ಸಂದರ್ಭದಲ್ಲಿ ಲಾರಿಯಲ್ಲಿದ್ದ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರಲ್ಲಿ ಆತಂಕ
ಗ್ಯಾಸ್ ತುಂಬಿದ್ದ ಸಿಲಿಂಡರ್ ಲಾರಿಯು ಅಪಘಾತಕ್ಕೀಡಾದಾಗ ಸಿಲಿಂಡರ್ ಸೋರಿಕೆಯಾಗಿಲ್ಲ. ಒಂದು ವೇಳೆ ಗ್ಯಾಸ್ ಸೋರಿಕೆಯಾಗಿದ್ದರೆ ಎಲ್ಲಾ ಸಿಲಿಂಡರ್ ಗಳು ಬ್ಲಾಸ್ಟ್ ಆಗಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ. ಅಲ್ಲದೆ ಗೋದಾಮಿನ ಸಮೀಪ ಲಾರಿ ಅವಘಡ ಸಂಭವಿಸಿದ ಜಾಗದಲ್ಲಿ ಹಲವಾರು ಮನೆಗಳು ಇದ್ದು ಮನೆ ಮಂದಿ ಬೆಳಗ್ಗಿನಿಂದಲೇ ಆತಂಕಗೊಂಡಿದ್ದರು.
ಗ್ಯಾಸ್ ಸಿಲಿಂಡರ್ ಲಾರಿಯು ಉರುಳಿ ಬಿದ್ದ ಸಂದರ್ಭದಲ್ಲಿ ಅಪಾಯವನ್ನರಿತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗ್ಯಾಸ್ ಸೋರಿಕೆಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಬಳಿಕ ಗ್ಯಾಸ್ ಸಿಲಿಂಡರ್ ಗಳನ್ನು ಕೆಳಗಿಳಿಸಿ ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.
ಅಗ್ನಿಶಾಮಕ ದಳದ ವಾಹನಕ್ಕೆ ಸ್ಕೂಟರ್ ಡಿಕ್ಕಿ: ಸವಾರ ಗಂಭೀರ
ಇನ್ನು ಸ್ಥಳೀಯರು ನೀಡಿದ ಮಾಹಿತಿಯಂತೆ ಗ್ಯಾಸ್ ಸಿಲಿಂಡರ್ ಲಾರಿ ಉರುಳಿ ಬಿದ್ದ ಸ್ಥಳಕ್ಕೆ ಕೂಡಲೇ ಎರಡು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದವು. ಈ ವೇಳೆ ಒಂದು ವಾಹನಕ್ಕೆ ಅಸೈಗೋಳಿಯ ಗಣೇಶ್ ಮಹಲ್ ಬಳಿ ಸ್ಕೂಟರ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.