ಮಂಗಳೂರು, ಮೇ06(Daijiworld News/SS): ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ 'ರಂಜಾನ್ ಹಬ್ಬ'ವೂ ಒಂದು. ಈ ಹಬ್ಬದಲ್ಲಿ ಮುಸ್ಲಿಮರು ಸತತ ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಉಪವಾಸವು (ರೋಝಾ)ಇಂದಿನಿಂದ ಪ್ರಾರಂಭವಾಗಿದೆ.
‘ರಂಜಾನ್’ ಎಂದು ಅರಬ್ಬಿ ಭಾಷೆಯಲ್ಲಿ ಕರೆಯಲಾಗುವ ಈ ತಿಂಗಳು ಮುಸ್ಲಿಮರ ಪಾಲಿಗೆ ಬಹಳ ಶ್ರೇಷ್ಠ ತಿಂಗಳು. ಈ ತಿಂಗಳು ಪೂರ್ತಿ ಜಗತ್ತಿನ ಎಲ್ಲಾ ಪ್ರದೇಶಗಳಲ್ಲಿ ಚದುರಿ ಹೋಗಿರುವ ಮುಸ್ಲಿಮರು ಏಕಕಾಲದಲ್ಲಿ ಜತೆಯಾಗಿ ಉಪವಾಸವನ್ನು ಆಚರಿಸುವುದು ಈ ತಿಂಗಳ ವಿಶೇಷತೆ. ರಂಜಾನ್ ಸ್ವಶುದ್ಧೀಕರಣದ ತಿಂಗಳು. ನೈತಿಕವಾಗಿ ಮತ್ತು ಮಾನಸಿಕವಾಗಿ ಶುದ್ಧೀಕರಣಗೊಳ್ಳುವ ತಿಂಗಳಾಗಿ ಮುಸ್ಲಿಮರು ಈ ತಿಂಗಳನ್ನು ಸ್ವೀಕರಿಸುತ್ತಾರೆ. ಆದರೆ ಈ ಬಾರಿಯ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಕಠಿಣವಾಗಲಿದೆ.
ಕಳೆದ ವರ್ಷ ಮೇ 15ರ ಬಳಿಕ ರಂಜಾನ್ ಆರಂಭಗೊಂಡು ಜೂನ್ ಮೊದಲ ವಾರದಲ್ಲಿ ಮುಕ್ತಾಯವಾಗಿತ್ತು. ಈ ವರ್ಷ ಮೇ ಆರಂಭದಲ್ಲೇ ರಂಜಾನ್ ಆರಂಭವಾಗಿದ್ದು, ಜೂನ್ ಆರಂಭಕ್ಕೆ ಹಬ್ಬ ಮುಗಿಯಲಿದೆ. ಈ ಹಿಂದೆಯೂ ಬೇಸಿಗೆಯಲ್ಲಿ ರಂಜಾನ್ ತಿಂಗಳು ಬಂದಿತ್ತು. ಆದರೆ ಈ ಬಾರಿಯಷ್ಟು ಬಿಸಿಲು ಹಿಂದೆಂದೂ ಇರಲಿಲ್ಲ. ಹೀಗಾಗಿ, ಈ ಬಾರಿಯ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಕಠಿಣವಾಗಲಿದೆ.
ವಿಶ್ವದಾದ್ಯಂತ ಈ ಒಂದು ಮಾಸದಲ್ಲಿ ಮುಸ್ಲಿಮರು ದಿನವಿಡೀ ಉಪವಾಸ ಆಚರಣೆ ಮಾಡುವ ಜೊತೆಗೇ ದಾನ ಧರ್ಮ, ವಿಶೇಷ ಪ್ರಾರ್ಥನೆಗಳನ್ನೂ ಆಚರಿಸುವ ಮೂಲಕ ಹೆಚ್ಚು ಹೆಚ್ಚಾಗಿ ಅಲ್ಲಾಹನ ಅನುಗ್ರಹ ಪಡೆಯಲು ಯತ್ನಿಸುತ್ತಾರೆ. ಈ ತಿಂಗಳಲ್ಲಿ ಬೆಳಗ್ಗಿನ ನಾಲ್ಕೂವರೆಯಿಂದ ಸಂಜೆಯ ಏಳು ಗಂಟೆಯವರೆಗೆ ಅನ್ನಾಹಾರಗಳನ್ನು ತ್ಯಜಿಸುವುದೇ ಉಪವಾಸವಲ್ಲ, ಬದಲಿಗೆ ಈ ಅವಧಿಯಲ್ಲಿ ಮನಸ್ಸಿನಲ್ಲಿ ಏಳುವ ಯಾವುದೇ ಬಯಕೆಗಳನ್ನು ನಿಗ್ರಹಿಸುವುದೇ ನಿಜವಾದ ಉಪವಾಸವಾಗಿದೆ.
ಉಪವಾಸವೆಂದರೆ ಕೇವಲ ಅನ್ನಾಹಾರದಿಂದ ದೂರವಿರುವುದು ಮಾತ್ರವಲ್ಲ, ಮನಸ್ಸನ್ನು ಕೆಟ್ಟ ಬಯಕೆಗಳಿಂದ ರಕ್ಷಿಸಲು ಸಾಧ್ಯವಾಗುವಂತೆ ಮಾಡಲು ಇಡಿಯ ತಿಂಗಳು ಶ್ರಮಪಡುವುದೇ ನಿಜವಾದ ಅರ್ಥವಾಗಿದೆ.