ವರದಿ - ಅಹಮ್ಮದ್ ಬಾವ
ಮಂಗಳೂರು, ಮೇ06(Daijiworld News/SS): ಕರಾವಳಿಯಲ್ಲಿ ದಿನೇದಿನೆ ಬಿಸಿಲಿನ ಧಗೆ ಹೆಚ್ಚುತ್ತಿದ್ದು, ಸೆಕೆಯ ಪ್ರಮಾಣ ಏರುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದಲ್ಲಿ ಪ್ರಾಣಿ-ಪಕ್ಷಿಗಳಿಗೆ ಹಿತಕರ ವಾತಾವರಣ ಸೃಷ್ಟಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದಲ್ಲಿ ಪ್ರಾಣಿ- ಪಕ್ಷಿಗಳಿರುವಲ್ಲಿ ವಾತಾವರಣವನ್ನು ತಂಪಾಗಿಸಲು ಹೆಚ್ಚುವರಿ ಫ್ಯಾನ್ಗಳ ಅಳವಡಿಕೆ, ನೀರು ಚಿಮ್ಮಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಲ್ಲಲ್ಲಿ ಅಳವಡಿಸಿರುವ ನೀರಿನ ತೊಟ್ಟಿಗಳಲ್ಲಿ ಪ್ರಾಣಿಗಳು ಬಿದ್ದುಕೊಂಡು ಸೆಕೆಯಿಂದ ಬಚಾವಾಗಲು ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನ ಪಿಲಿಕುಲದ ಪರಿಸರದಲ್ಲಿ ಹೇರಳವಾಗಿ ಮರಗಿಡಗಳಿದ್ದರೂ ಬಿಸಿಲಿನ ತಾಪ ಹೆಚ್ಚಾಗಿಯೇ ಇದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಪ್ರಾಣಿ ಪಕ್ಷಿಗಳಿಗೆ ಅಗತ್ಯವಿದೆ. ಸುಮಾರು 150 ಎಕ್ರೆಯಲ್ಲಿ ಹರಡಿಕೊಂಡ ಉದ್ಯಾನವನದಲ್ಲಿ 50ಕ್ಕೂ ಮಿಕ್ಕಿ ಪ್ರಭೇದಗಳ ಸಾವಿರಾರು ಪ್ರಾಣಿ- ಪಕ್ಷಿಗಳಿವೆ. ಹೀಗಾಗಿ ಪ್ರಾಣಿ ಪಕ್ಷಿಗಳಿಗೆ ಹಿತಕರ ವಾತಾವರಣ ಸೃಷ್ಟಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರಾದ ಹೆಚ್. ಜಯಪ್ರಕಾಶ್ ಭಂಡಾರಿ, ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಪ್ರಾಣಿ-ಪಕ್ಷಿಗಳು ಇರುವ ಪ್ರದೇಶದಲ್ಲಿ ಸಣ್ಣ ಸಣ್ಣ ಕೊಳಗಳನ್ನು ನಿರ್ಮಿಸಲಾಗಿದೆ. ಅದ್ರಲ್ಲಿ ಸತತ 24 ಗಂಟೆಗಳ ಕಾಲ ನೀರು ನಿಲ್ಲುವಂತೆ ಮಾಡಲಾಗುತ್ತೆ. ಆ ನೀರಿನಲ್ಲಿ ಪ್ರಾಣಿ-ಪಕ್ಷಿಗಳು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳುತ್ತವೆ ಹಾಗೂ ತಮ್ಮ ದಾಹಗಳನ್ನು ನೀಗಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
ಬಿಸಿಲಿನ ಧಗೆಯಿಂದ ಪ್ರಾಣಿ-ಪಕ್ಷಿಗಳ ಸೆಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಫ್ಯಾನ್, ನೀರು ಚಿಮ್ಮಿಸುವ ಮೂಲಕ ವಾತಾವರಣವನ್ನು ತಂಪಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲಲ್ಲಿ ನೀರಿನ ಕೊಳ, ಟ್ಯಾಂಕ್ಗಳನ್ನೂ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.