ಮಂಗಳೂರು, ಮೇ06(Daijiworld News/SS): ಕುಡಿಯುವ ನೀರಿನ ಕೊರತೆ ಉಂಟಾಗಿರುವುದರಿಂದ ಪರಿಸ್ಥಿತಿ ಎದುರಿಸಲು ತುರ್ತು ಕ್ರಮ ಕೈಗೊಳ್ಳುವುದಕ್ಕಾಗಿ ತಕ್ಷಣದಿಂದಲೇ ಚುನಾವಣಾ ನೀತಿಸಂಹಿತೆಯನ್ನು ಸಡಿಲಿಸಬೇಕು ಎಂದು ಐವನ್ ಡಿಸೋಜ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಮತ್ತು ಕುಡಿಯುವ ನೀರಿನ ಕೊರತೆ ಇದೆ. ಇಲ್ಲಿ ಮತದಾನ ಮುಗಿದು ಎರಡು ವಾರ ಕಳೆದಿದೆ. ಈಗಾಗಲೇ, ಇಲ್ಲಿ ಬರ ನಿರ್ವಹಣೆಯಂತಹ ತುರ್ತು ಕೆಲಸಗಳ ವಿಚಾರದಲ್ಲಿ ಸಭೆ ನಡೆಸಲು ಮುಖ್ಯಮಂತ್ರಿ ಮತ್ತು ಸಚಿವರಿಗೆ ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ನೀತಿಸಂಹಿತೆ ಸಡಿಲಿಕೆಯನ್ನು ವಿರೋಧಿಸಿ ಪತ್ರ ಬರೆದಿದ್ದಾರೆ. ಇದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಲಾಗದ ಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ, ಸಚಿವರು ಮತ್ತು ಸಂಸದೀಯ ಕಾರ್ಯದರ್ಶಿಗಳು ಆಡಳಿತ ನಿರ್ವಹಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳದಂತೆ ತಡೆಯುತ್ತಿರುವುದು ಸರಿಯಲ್ಲ. ಬರ ಪರಿಸ್ಥಿತಿ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಮುಖ್ಯಮಂತ್ರಿ, ಸಚಿವರು ಮತ್ತು ಸಂಸದೀಯ ಕಾರ್ಯದರ್ಶಿಗಳಿಗೂ ಸಭೆ ನಡೆಸಲು ಅವಕಾಶ ನೀಡಿ ನೀತಿಸಂಹಿತೆ ಸಡಿಲಿಸಬೇಕು ಎಂದು ಆಗ್ರಹಿಸಿದರು.
ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 4.38 ಮೀಟರ್ಗೆ ಕುಸಿದಿದೆ. 2018ರ ಮೇ 6ರಂದು ನೀರಿನ ಸಂಗ್ರಹ 5.6 ಮೀಟರ್ ಇತ್ತು. ಈ ಬಾರಿ ಹೆಚ್ಚಿನ ಕೊರತೆ ಕಾಡುತ್ತಿದೆ. ಆವಿಯಾಗುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ನೀರಿನ ಕೊರತೆ ಆಗದಂತೆ ತಡೆಯಲು ತುಂಬೆ ಅಣೆಕಟ್ಟೆಯಲ್ಲಿ ತುಂಬಿರುವ ಹೂಳನ್ನು ಹೊರಕ್ಕೆ ತೆಗೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಕಾಮಗಾರಿಗೆ ಜಿಲ್ಲಾಧಿಕಾರಿಯವರು ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಕುಡಿಯುವ ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರತೆ ಉಂಟಾದ ಜನವಸತಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಯಾವುದೇ ಭಾಗದಲ್ಲಿ ಸಮಸ್ಯೆ ಇದ್ದರೂ ಜನರು ನೇರವಾಗಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು. ಆಗ ತುರ್ತಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡಿದರು.