ಮಂಗಳೂರು, ಮೇ06(Daijiworld News/SS): ಕೆಲ ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಮಾನಸಿಕ ಸ್ಥಿಮಿತವನ್ನು ಕಳೆದು ಮಾತನಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಎ ಸಿ ವಿನಯರಾಜ್ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಲೋಕಸಭಾ ಚುನಾವಣೆಯ 5ನೇ ಹಂತದ ಚುನಾವಣೆ ಮುಗಿದಿದೆ. ಈ ಹಿಂದೆ ದೇಶದಲ್ಲಿ ಬಿಜೆಪಿಯು ಕಳಪೆ ಪ್ರದರ್ಶನ ನೀಡಿದ್ದು, ಮೋದಿ ಸರ್ಕಾರ ಮತ್ತೆ ಬರುವುದಿಲ್ಲ ಎಂಬುವುದನ್ನು ಅರಿತ ಪ್ರಧಾನಿಯವರು ಮಾನಸಿಕ ಸ್ಥಿಮಿತವನ್ನು ಕಳೆದು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜೀವ್ ಗಾಂಧಿಯವರ ಬಗ್ಗೆ ಮೋದಿ ಕೀಳುಮಟ್ಟದ ಪದವನ್ನು ಉಪಯೋಗಿಸಿ ಮಾತನಾಡಿದ್ದಾರೆ. ಈ ರೀತಿ ಕೆಟ್ಟ ಪದಗಳನ್ನು ಬಳಸಿ ಮಾತನಾಡುವ ಪ್ರಧಾನಿಯನ್ನು ದೇಶ ಹಿಂದೆಂದೂ ನೋಡಿರಲಿಲ್ಲ. ರಾಜೀವ್ ಗಾಂಧಿ ಪ್ರಪಂಚವೇ ಕಂಡ ಮಹಾನ್ ನಾಯಕ. ರಾಜೀವ್ ಗಾಂಧಿ ವಿರುದ್ಧವಾಗಿ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ಮೋದಿಯವರು 5 ವರ್ಷದಲ್ಲಿ ತಾನು ಮಾಡಿದ ಅಭಿವೃದ್ಧಿಗಳನ್ನು ಹೇಳಿ ಮತ ಕೇಳುವ ಬದಲು, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಿರುದ್ಧ ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ಭಾರತೀಯ ಸೇನೆ ಮಾಡಿದ ಯುದ್ಧವನ್ನು ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂದು ದೂರಿದರು.
ಮೋದಿ ಒಬ್ಬ ಮಹಾನ್ ಸುಳ್ಳುಗಾರ. ಉದ್ಯೋಗ ಸೃಷ್ಟಿ, ಜಿ.ಎಸ್.ಟಿ, ಕಪ್ಪು ಹಣ, ರೈತರಿಗೆ ಬೆಂಬಲ ಹಣ, ಭ್ರಷ್ಟರನ್ನು ಜೈಲಿಗಟ್ಟುತ್ತೇನೆ ಎಂದು ಹೇಳಿ ಯಾವುದೇ ಕೆಲಸವನ್ನು ಮಾಡಿಲ್ಲ. ಪರಿಣಾಮ, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಯುವಕರಿಗೆ ಪಕೋಡಾ ಮಾರಲು ಕರೆ ನೀಡಿದ್ದಾರೆ. ಈ ಮೂಲಕ ಸುಳ್ಳುಗಾರನೆಂಬುವುದನ್ನು ಮೋದಿ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.