ಕಾಸರಗೋಡು, ಮೇ 7(Daijiworld News/MSP): ಶ್ರೀಲಂಕಾ ಬಾಂಬ್ ಸ್ಫೋಟದ ನಂತರ ಕಾಸರಗೋಡಿನಿಂದ ಎನ್ಐಎ ಕಸ್ಟಡಿಗೆ ಪಡೆದ ಇಬ್ಬರು, ಭಯೋತ್ಪಾದಕ ಸಂಘಟನೆ ಐಸಿಎಸ್ ಜತೆ ಸಂಬಂಧ ಹೊಂದಿರುವ ಬಗ್ಗೆ ತಿಳಿದುಬಂದಿರುವುದರಿಂದ, ಇಬ್ಬರನ್ನೂ ಆರೋಪಿಗಳೆಂದು ಘೋಷಿಸಲಾಗಿದೆ. ಐಎಸ್ ಸಂಘಟನೆ ಜತೆ ಸಂಬಂಧ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಎನ್ಐಎ ವಶದಲ್ಲಿದ್ದ ಕಾಸರಗೋಡು ಕೂಡ್ಲು ಕಾಳ್ಯಂಗಾಡು ನಿವಾಸಿ ಅಹಮ್ಮದ್ ಅರಾಫತ್ (23) ಹಾಗೂ ವಿದ್ಯಾನಗರ ನಾಯಮ್ಮಾರಮೂಲೆ ಅಬೂಬಕ್ಕರ್ ಸಿದ್ದಿಕ್ (28) ಬಂಧಿತರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇವರು ಐಸಿಎಸ್ ಪರವಾಗಿ ಕೇರದಲ್ಲಿ ತೀವ್ರ್ ಪ್ರಚಾರ ನಡೆಸುತ್ತಿದ್ದಾರೆ ಎಂದು ಎನ್ಐಎ ವರದಿಯಲ್ಲಿ ಹೇಳಿದೆ.
ಶ್ರೀಲಂಕಾದಲ್ಲಿ ಆತ್ಮಾಹುತಿ ಸ್ಫೋಟ ನಡೆಸಿದ ತೌಹೀತ್ ಜಮಾಅತ್ನ ನಾಯಕ ಸಫ್ರಾನ್ ಹಾಶಿಂನ ಅಭಿಮಾನಿಗಳಾಗಿದ್ದು, ಹಾಶಿಂ ಭಾಷಣದಿಂದ ಸ್ಫೂರ್ತಿ ಪಡೆದಿದ್ದರು ಎನ್ನಲಾಗಿದೆ. ಇವರಿಬ್ಬರ ಜತೆಗೆ ಕೊಲ್ಲಂ ನಿವಾಸಿ ಮೊಹಮ್ಮದ್ ಫೈಜಲ್ ಎಂಬಾತನನ್ನೂ ಐಎಸ್ ಸಂಬಂಧದ ಆಧಾರದಲ್ಲಿ ಆರೋಪಿ ಎಂದು ಘೋಷಿಸಲಾಗಿದೆ. ಈ ಬಗ್ಗೆ ಎನ್ಐಎ ತಂಡ, ಕೊಚ್ಚಿ ವಿಶೇಷ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದೆ.
ಸಿರಿಯಾದಲ್ಲಿರುವ ಐಸಿಎಸ್ ಭಯೋತ್ಪಾದಕ ಅಬ್ದುಲ್ ರಶೀದ್ ಜತೆ ಈ ಕುರಿತು ಸಂಭಾಷಣೆ ನಡೆಸಿರುವುದನ್ನು ಎನ್ಐಎ ಪತ್ತೆ ಹಚ್ಚಿದೆ. ಇದೇ ಕೇಸ್ ಗೆ ಸಂಬಂಧಿಸಿದಂತೆ ಪಾಲ್ಘಾಟ್ನ ರಿಯಾಜ್ ಅಬೂಬಕ್ಕರ್ ಮೇಲೆಯೂ ಆರೋಪ ಹೊರಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಕಸ್ಟಡಿಗೆ ಪಡೆದಿದೆ. ಜಹ್ರಾನ್ ಹಾಶೀಮ್ ಜತೆ ರಿಯಾಜ್ ವಿಚಾರ ವಿನಿಮಯ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಕಾಸರಗೋಡಿನಿಂದ 2016 ರಲ್ಲಿ 20 ಮಂದಿ ಸಿರಿಯಾದ ಐಎಸ್ ಕೇಂದ್ರಕ್ಕೆ ಹೋಗಿದ್ದು, ಅದರ ಸೂತ್ರಧಾರನಾದ ತ್ರಿಕರಿಪುರದ ರಾಶೀದ್ ಜತೆ, ಕಾಸರಗೋಡಿನ ಇಬ್ಬರ ಸಹಿತ ನಾಲ್ವರು ಆರೋಪಿಗಳು ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇರೆಗೆ ಇವರನ್ನು ಕಸ್ಟಡಿಗೆ ಪಡೆಯಲಾಗಿತ್ತು