ಕಾಸರಗೋಡು,ಮೇ 7(Daijiworld News/MSP): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಪೆರಿಯ ಕಲ್ಯೊಟ್ ನ ಕೃಪೇಶ್ ಮತ್ತು ಶರತ್ ಲಾಲ್ ರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದುಮ ಶಾಸಕ ಕೆ. ಕುಞರಾಮನ್ ಸೇರಿದಂತೆ ನಾಲ್ವರು ಸಿಪಿಎಂ ಮುಖಂಡರನ್ನು ತನಿಖಾ ತಂಡ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಕ್ರೈಂ ಬ್ರಾಂಚ್ ಕಚೇರಿಗೆ ಮುಖಂಡರನ್ನು ಕರೆಸಿ ಮಾಹಿತಿ ಕಲೆ ಹಾಕಲಾಗಿದೆ.
ಕೆ . ಕುಞ ರಾಮನ್ ಅಲ್ಲದೆ ಮಾಜಿ ಶಾಸಕ ಕೆ . ವಿ ಕುಞ ರಾಮನ್, ಸಿಪಿಎಂ ಉದುಮ ವಲಯ ಕಾರ್ಯದರ್ಶಿ ಕೆ.ಮಣಿಕಂಠನ್, ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿ .ಪಿ .ಪಿ ಮುಸ್ತಫಾರವರನ್ನು ವಿಚಾರಣೆ ಗೊಳಪಡಿಸಿದೆ.
ಇಬ್ಬರ ಕೊಲೆ ಹಿಂದೆ ಸಿಪಿಎಂ ನ ಉನ್ನತ ನಾಯಕರ ಕೈವಾಡ ಇದೆ ಎಂಬಮಾತು ಕೇಳಿ ಬಂದಿತ್ತು. ಈ ಬಗ್ಗೆ ಕೃಪೇಶ್ ಮತ್ತು ಶರತ್ ಲಾಲ್ ರ ಕುಟುಂಬಸ್ಥರು ಹಾಗೂ ಕಾಂಗ್ರೆಸ್ ಆರೋಪಿಸಿತ್ತು .ಕೃತ್ಯದಲ್ಲಿ ಸಿಪಿಎಂ ಸ್ಥಳೀಯ ಸಮಿತಿ ಮುಖಂಡ ಪೀತಾಂಬರನ್ ಸೇರಿದಂತೆ ಸಿಪಿಎಂ ಕಾರ್ಯಕರ್ತರು ಶಾಮೀಲಾದ ಹಿನ್ನಲೆಯಲ್ಲಿ ಮುಖಂಡರು ಸಂಚಿನಲ್ಲಿ ಶಾಮೀಲಾಗಿದ್ದಾರೆ ಎಂಬ ಸಂಶಯ ಉಂಟಾಗಿತ್ತು . ಕೊಲೆ ನಡೆಯುವ ದಿನಗಳ ಹಿಂದೆ ವಿಪಿಪಿ ಮುಸ್ತಫಾ ಪ್ರತಿಭಟನಾ ಸಮಾವೇಶವೊಂದರಲ್ಲಿ ಬೆದರಿಕೆ ಮಾತುಗಳನ್ನಾಡಿದ ವಿಡಿಯೋ ಬಹಿರಂಗಗೊಂಡಿತ್ತು . ಇದಲ್ಲದೆ ಆರೋಪಿಗಳು ಕೃತ್ಯ ನಡೆಸಿದ ದಿನ ಸಿಪಿಎಂ ಸ್ಥಳೀಯ ಕಚೇರಿಗೆ ಬಂದಿದ್ದರು . ಇದರಿಂದ ಉನ್ನತ ಮುಖಂಡರ ಕೈವಾಡ ಇದೆ ಎಂಬ ಆರೋಪ ದಟ್ಟವಾದ ಹಿನ್ನಲೆಯಲ್ಲಿ ಶಾಸಕ ಸೇರಿದಂತೆ ಸಿಪಿಎಂ ಮುಖಂಡರನ್ನು ವಿಚಾರಣೆಗೊಳಪಡಿಸಿದೆ.