ನೆಲ್ಯಾಡಿ, ಮೇ 7(Daijiworld News/MSP): ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿದ್ದ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಮೇ. 07 ರ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಪೇಟೆಯ ಬಳಿ ಈ ಘಟನೆ ನಡೆದಿದ್ದು, ಘಟನೆ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು, ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಬೆಂಗಳೂರು ಮೂಲದ ಸುನಿಲ್ ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದವರೆಲ್ಲರೂ, ಬೆಂಗಳೂರು ಮೂಲದವರಾಗಿದ್ದು ಇವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಬಳಿಕ ಕುಕ್ಕೆ ಸುಬ್ರಮಣ್ಯದ ಕಡೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 20 ಅಡಿ ಆಳವಿರುವ ಗುಂಡಿಗೆ ಕಾರು ಬಿದ್ದಿದ್ದು ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.