ಮಲ್ಪೆ, ಮೇ 08 (Daijiworld News/MSP):ಒಂದೆಡೆ ಐದು ತಿಂಗಳಿಂದ ಮಾನಸಿಕ ತೊಳಲಾಟ ಮತ್ತೊಂದೆಡೆ ವದಂತಿಗಳಿಂದ ಒತ್ತಡಕ್ಕೆ ಒಳಗಾಗಿ ಸಂಕಟಪಡಬೇಕಾದ ಸ್ಥಿತಿ.
ಹಲವು ವರ್ಷಗಳಿಂದ ಸಮುದ್ರದಲ್ಲಿ ಸುತ್ತಾಡಿಸಿದ್ದ ದೋಣಿ ಮುಳುಗಿದ್ದು ಹೇಗೆ, ಅದರಲ್ಲಿದ್ದವರು ಏನಾದರು ಎಂಬ ಪ್ರಶ್ನೆ ಇನ್ನೊಂದೆಡೆ. ಇವುಗಳ ಮಧ್ಯೆ ಸಿಲುಕಿರುವ ಕುಟುಂಬ ಸದಸ್ಯರ ಹಣೆಯಲ್ಲಿ ಮುಂದೇನು ಮಾಡಬೇಕು ಎಂಬ ಚಿಂತೆಯ ಗೆರೆ. ಡಿ.15ರಂದು ಮಲ್ಪೆಯಿಂದ ಮೀನುಗಾರಿಕೆಗೆ ಹೊರಟು ನಾಪತ್ತೆಯಾದ ‘ಸುವರ್ಣ ತ್ರಿಭುಜ’ ದೋಣಿಯಲ್ಲಿದ್ದ ಏಳು ಮೀನುಗಾರರ ಮನೆಯವರ ಸದ್ಯದ ಸ್ಥಿತಿಯಿದು. ದೋಣಿ ಮುಳುಗಿದ ಸುದ್ದಿಯನ್ನು ಸಂಪೂರ್ಣವಾಗಿ ನಂಬಲೂ ಅವರಿಗಾಗುತ್ತಿಲ್ಲ. ದೋಣಿಯ ಅವಶೇಷಗಳು ಆಳ ಸಮುದ್ರದಲ್ಲಿ ಇವೆ ಎಂದು ನೌಕಾಪಡೆ ದೃಢಪಡಿಸಿದೆ. ಆದರೆ, ಅದರಲ್ಲಿದ್ದ ಏಳು ಮಂದಿ ಏನಾದರು ಎಂಬುದು ಯಾರಿಗೂ ಗೊತ್ತಿಲ್ಲ.
ಹೀಗಾಗಿ ಸುವರ್ಣ ತ್ರಿಭುಜ ಬೋಟನ್ನು ಸಮುದ್ರದಾಳದಿಂದ ಮೇಲಕ್ಕೆತ್ತುವ ಕೆಲಸವಾಗಬೇಕು ಎಂದು ನಾಪತ್ತೆಯಾಗಿರುವ ಮೀನುಗಾರರ ಕುಟುಂಬದವರು ಆಗ್ರಹಿಸುತ್ತಿದ್ದಾರೆ.
ಎಲ್ಲರೂ ಬೋಟನ ಅವಶೇಷ ಪತ್ತೆಯಾಗಿದೆ ಎನ್ನುತ್ತಾರೆ ಹಾಗಿದ್ದರೆ ಮೀನುಗಾರರು ಏನಾದರೂ ಎಂದು ನಮಗೆ ಗೊತ್ತಾಗಬೇಕು . ಬಲೆ ಹಾಕಿದ ಬಳಿಕ ಹೆಚ್ಚಾಗಿ ಮೀನುಗಾರರು ಮಲಗಿರುತ್ತಾರೆ. ಮಲಗುವಾಗ ಬೋಟಿನ ಕ್ಯಾಬಿನ್ ನ ಬಾಗಿಲು ಹಾಕಿ ಮಲಗುತ್ತಾರೆ. ಹೀಗಾಗಿ ಒಂದು ವೇಳೆ ಅವರು ಮೃತಪಟ್ಟಿದ್ದರೂ ಬೋಟ್ ನ ಕ್ಯಾಬಿನ್ ಒಳಗೆ ಶವಗಳು ಇರುವ ಸಾಧ್ಯತೆ ಇದೆ. ಹೀಗಾಗಿ ಮುದ್ರದಾಳದಿಂದ ಬೋಟನ್ನು ಮೇಲೆತ್ತುವ ಕೆಲಸ ಆಗಬೇಕು ಎಂದು ಮೀನುಗಾರರು ಆಗ್ರಹಿಸುತ್ತಾರೆ.