ಮಂಗಳೂರು, ನ 21: ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಮತ್ತು ಮಗನ ಜವಾಬ್ದಾರಿಯ ಹೊಣೆಯನ್ನು ಹೊತ್ತುಕೊಂಡು ವಿದೇಶ ಉದ್ಯೋಗಕ್ಕೆ ತೆರಳಿದ ಮಹಿಳೆಯೊಬ್ಬರು ತೊಂದರೆಗೊಳಗಾಗಿರುವ ಘಟನೆ ಮಂಗಳೂರು ಸಮೀಪದ ವಾಮಂಜೂರಿನಲ್ಲಿ ನಡೆದಿದೆ.
ವಿದೇಶದಲ್ಲಿ ಸಂಕಷ್ಟದಲ್ಲಿರುವ ಮಂಗಳೂರು ಮೂಲದ ಮಹಿಳೆಯನ್ನು ವಿಜಯ ಎಂದು ಗುರುತಿಸಲಾಗಿದೆ. ವಾಮಂಜೂರಿನ ಕೆಲರೈ ಕೋಡಿ ಎರಡನೇ ಬ್ಲಾಕಿನ ನಿವಾಸಿ ಬಾಲಕೃಷ್ಣ ಅವರ ಪತ್ನಿ ವಿಜಯಾ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೀಡಾಗಿದ್ದು, ಇದೀಗ ಈಕೆಯ ಬಿಡುಗಡೆಗಾಗಿ ವೃದ್ಧ ಪತಿ ಮತ್ತು ಪುತ್ರ ನೆರವು ಯಾಚಿಸಿದ್ದಾರೆ.
2015 ರಲ್ಲಿ ಮಹಿಳೆಯೊಬ್ಬರ ಪರಿಚಯದಿಂದ ವಿಜಯಾ ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕೆಂದು ತೆರಳಿದ್ದರು. ಕುಟುಂಬ ನಿರ್ವಹಣೆಯ ಹೊಣೆ ಸಂಪೂರ್ಣ ಇವರ ಮೇಲೆ ಇತ್ತು. ಅಪರೂಪಕ್ಕೊಮ್ಮೆ ಫೋನ್ ಸಂಪರ್ಕಕ್ಕೆ ಸಿಗುತ್ತಿದ್ದ ವಿಜಯಾ, ಕಳೆದ ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಹೀಗಾಗಿ ವಿಜಯಾ ಅವರ ಪತಿ ನೆರೆ ಮನೆಯವರ ಜೊತೆ ಈ ವಿಚಾರವಾಗಿ ಮಾತನಾಡಿದ್ದರು.
ಫರಂಗಿಪೇಟೆಯ ರಿಯಾಝ್ ಎಂಬುವವರು ಸೌದಿ ಅರೇಬಿಯಾದಲ್ಲಿರುವ ಮಂಗಳೂರು ಮೂಲದ ಕೆಲ ಯುವಕರಿಗೆ ವಿಷಯ ತಲುಪಿಸಿದ್ದು, ಇದೀಗ ಅನಿವಾಸಿ ಭಾರತೀಯರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಇಂಡಿಯನ್ ಸೋಶಿಯಲ್ ಫಾರಂ ವಿಜಯಾ ಪ್ರಕರಣವನ್ನು ಭಾರತೀಯ ರಾಯಭಾರ ಕಚೇರಿ ಗಮನಕ್ಕೆ ತಂದಿದೆ. ಮಾತ್ರವಲ್ಲದೆ ದಾಖಲೆ ಪತ್ರಗಳನ್ನು ಸಲ್ಲಿಸಿ ಬಿಡುಗಡೆಗಾಗಿ ಪ್ರಯತ್ನಿಸುತ್ತಿದೆ. ಮುಂದಿನ ವಾರ ಮತ್ತೇ ಭಾರತಕ್ಕೆ ಮರಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.