ಪುತ್ತೂರು , ನ 21: ಇಲ್ಲಿನ ಪೊಲೀಸ್ ಠಾಣೆಯ ನಿವೃತ್ತ ಎ.ಎಸ್.ಐ ಶೇಷಪ್ಪ ಪೂಜಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಬಳ್ಳೇರಿ ರಕ್ಷಿತಾರಣ್ಯದ ಮೇಗಿನಪಂಜ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ನ 21 ರ ಮಂಗಳವಾರ ಮುಂಜಾನೆ ಈ ವಿಚಾರ ಬೆಳಕಿಗೆ ಬಂದಿದೆ. ಪರ್ಲಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರು ಸೋಮವಾರಷ್ಟೇ ಕುಂಜೂರುಪಂಜದ ತಮ್ಮ ಮನೆಗೆ ತೆರಳಿದ್ದರು. ಆರ್ಯಾಪು ಗ್ರಾಮದ ಕುಂಜೂರು ಪಂಜ ನಿವಾಸಿಯಾದ ಶೇಷಪ್ಪ ಪೂಜಾರಿ ಕಳೆದ ವರ್ಷವಷ್ಟೇ ಪುತ್ತೂರು ಪೊಲೀಸ್ ಠಾಣೆಯ ಎ.ಎಸ್.ಐಯಾಗಿ ನಿವೃತ್ತರಾಗಿದ್ದರು. ಬೆಳಗಿನ ಜಾವ ಅವರು ಬಳ್ಳೇರಿ ರಕ್ಷಿತಾರಣ್ಯದಲ್ಲಿ ಕುತ್ತಿಗೆಗೆ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ವಿಶಾಲಾಕ್ಷಿ ಮತ್ತು ಪುತ್ರರಾದ ಪಿ. ಎಸ್. ರಕ್ಷಿತ್, ಹಾಗೂ ಪಿ. ಎಸ್. ಶೋಭಿತ್ ರನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.