ಉಡುಪಿ, ಮೇ 08(Daijiworld News/SM): ನಗರದಲ್ಲಿ ಎಷ್ಟು ನೀರು ಬಳಕೆ ಮಾಡಲಾಗುತ್ತದೆ ಮತ್ತು ಎಷ್ಟು ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ನಗರಸಭೆಯು ಆಡಿಟಿಂಗ್ ಮಾಡಿ, ಸಾರ್ವಜನಿಕರ ಮುಂದೆ ವರದಿ ಪ್ರಸ್ತುತ ಪಡಿಸಬೇಕು. ಆಗ ನಗರದ ನೀರು ಎಲ್ಲಿ ಪೋಲಾಗುತ್ತಿದೆ ಮತ್ತು ಎಷ್ಟು ಕಾನೂನು ಬಾಹಿರ ಪೈಪ್ ಲೈನ್ ಗಳಿವೆ ಎಂದು ಬಹಿರಂಗವಾಗುತ್ತದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನ್ ಬಾಗ್ ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ವರ್ಷಗಳ ಹಿಂದೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಡಿಟಿಂಗ್ ನಡೆಸಿದ್ದೆವು. ಆಗ ನೀರಿನ ಹಗರಣ ಬಯಲಿಗೆ ಬಂದಿತ್ತು. ಅಂತೆಯೇ, ಇಂದು ಕೂಡ ಯುವಕರ ತಂಡ ಮನಸ್ಸು ಮಾಡಿದರೆ ಆ ಆಡಿಟಿಂಗ್ ನ್ನು ಮಾಡಬಹುದು. ಅದಕ್ಕೆ ಸಂಬಂಧಪಟ್ಟಂತೆ ಯೋಜನೆ ನನ್ನ ಬಳಿ ಇದೆ ಹಾಗೂ ಮಾರ್ಗದರ್ಶನ ನೀಡಲು ಸಿದ್ದ ಎಂದರು.
ನಗರದೆಲ್ಲೆಡೆ ನೀರು ಪೋಲಾಗುವುದನ್ನು ತಡೆಯಲು, ಹಗರಣ ಹಾಗೂ ಕಾನೂನು ಬಾಹಿರ ಚಟುವಟಿಕೆಯನ್ನು ನಿಲ್ಲಿಸಲು, ಯುವಕ ಮಂಡಲ, ಯುವ ಸಂಘಗಳು ಸ್ವ ಇಚ್ಚೆಯಿಂದ ಬಂದು ನಮ್ಮ ಜೊತೆ ಕೈಗೂಡಿಸಿದರೆ, ನೀರಿನ ಆಡಿಟಿಂಗ್ ಕಾರ್ಯ ಸಂಪೂರ್ಣ ಮಾಡಬಹುದು ಎಂದ ಅವರು, ನೀರಿನ ಸಮಸ್ಯೆಗೂ ಹಾಗೂ ಎಮರ್ಜೆನ್ಸಿಗೂ ಯಾವುದೇ ಸಂಬಂದವಿಲ್ಲ. ಅಧಿಕಾರಿಗಳು ಸುಮ್ಮನೆ ನೆಪ ಹುಡುಕುತ್ತಿದ್ಧಾರೆ ಎಂದರು.
ಮಣಿಪಾಲದ 100 ಕ್ಕೂ ಹೆಚ್ಚಿನ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಯಾವುದೇ ಚರಂಡಿ ವ್ಯವಸ್ಥೆ ಇಲ್ಲ. ಆ ಕೊಳಚೆ ನೀರು ನೇರವಾಗಿ ಬಾವಿಯನ್ನು ಸೇರುತ್ತಿವೆ. ಇದು ಅಪಾಯಕಾರಿ. ಆ ಪ್ರದೇಶದಲ್ಲಿ ಕೊರೆದ ಸುಮಾರು 350 ಕ್ಕೂ ಅಧಿಕ ಬೋರ್ ವೆಲ್ಗಳನ್ನು ನೀರು ಕಲುಷಿತ ಗೊಂಡದ್ದಕ್ಕಾಗಿ ಮುಚ್ಚಲಾಗಿದೆ.