ಸುಳ್ಯ, ಮೇ 08(Daijiworld News/SM): ಪಿಯುಸಿ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯದೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಸಿಗುವುದನ್ನು ನಾವು ಕಂಡಿದ್ದೇವೆ.ಆದರೆ, ಉತ್ತರವಾಗಿ ಪರೀಕ್ಷೆಗೆ ಸಿದ್ಧತೆ ನಡೆಸಿ ಪರೀಕ್ಷೆ ಬರೆದ ಮೇಲೂ ಕಡಿಮೆ ಅಂಕ ಬಂದಾಗ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಆಘಾತವುಂಟಾಗುತ್ತದೆ. ಹಾಗೂ ಈ ವಿಚಾರ ಅಚ್ಚರಿಗೆ ಕಾರಣವಾಗುತ್ತದೆ. ಇಂತಹವೊಂದು ಘಟನೆ ಸುಳ್ಯದಲ್ಲಿ ನಡೆದಿದ್ದು, 90 ಅಂಕ ಪಡೆಯ ಬೇಕಿದ್ದ ವಿದ್ಯಾರ್ಥಿನಿಗೆ ಸಿಕ್ಕಿದ್ದು ಬರೇ 40 ಅಂಕಗಳು ಮಾತ್ರ.
ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದು ಮುಗಿಸಿದ್ದ ವಿದ್ಯಾರ್ಥಿನಿ ಯುಕ್ತಳಿಗೆ ನಿರೀಕ್ಷಿತ ಅಂಕ ಸಿಗದೆ ಆಕೆ ಕಂಗಾಲಾಗಿದ್ದಾರೆ. ವೈದ್ಯೆಯಾಗಬೇಕೆನ್ನುವ ಕನಸು ಕಂಡಿದ್ದ ಈಕೆಗೆ ಮೌಲ್ಯ ಮಾಪಕರು ಮಾಡಿರುವ ಒಂದೇ ಒಂದು ಎಡವಟ್ಟು ಇದೀಗ ನಿದ್ದೆಗೆಡಿಸಿದೆ.
ಚೆನ್ನಾಗಿಯೇ ಪರೀಕ್ಷೆ ಎದುರಿಸಿದ್ದ ಯುಕ್ತ, ಉತ್ತಮ ಅಂಕದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಳು. ಬಯಸಿದಂತೆ ಅಂಕಗಳೇನು ಸಿಕ್ಕಿದೆ, ಆದರೆ ಕನ್ನಡ ವಿಷಯದಲ್ಲಿ ಮಾತ್ರ ಪ್ರಮಾದವಾಗಿದೆ. ವಿದ್ಯಾರ್ಥಿನಿಗೆ ಸಿಗಬೇಕಾಗಿದ್ದದ್ದು, 90 ಅಂಕ. ಆದರೆ, ಅಂಕ ಪಟ್ಟಿಯಲ್ಲಿ ಕೇವಲ 40 ಅಂಕಗಳು ಮಾತ್ರ ನಮೂದಾಗಿವೆ. ಅನಿರೀಕ್ಷಿತ ಫಲಿತಾಂಶವನ್ನು ಕಂಡು ವಿದ್ಯಾರ್ಥಿನಿಗೆ ಆಘಾತ ಉಂಟಾಗಿತ್ತು.
ಇನ್ನು ಮಗಳ ಫಲಿತಾಂಶ ಪೋಷಕರಿಗೂ ಹತಾಶೆಯನ್ನುಂಟು ಮಾಡಿತ್ತು. ಆಕೆಯನ್ನು ಪ್ರಶ್ನಿಸಿದಾಗಿ ನನ್ನ ನಿರೀಕ್ಷೆ 90 ಅಂಗಗಳನ್ನು ಪಡೆಯುವುದು ಎಂದಿದ್ದಳು. ಈ ಹಿನ್ನೆಲೆ ಆಕೆಯ ತಂದೆ ಪಿಯು ಬೋರ್ಡ್ ಗೆ ಹಣ ಪಾವತಿಸಿ ತನ್ನ ಮಗಳ ಉತ್ತರ ಪತ್ರಿಕೆಯನ್ನು ತರಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಮೌಲ್ಯ ಮಾಪಕರು ಮಾಡಿರುವ ಪ್ರಮಾದ ತಿಳಿದಿದೆ. ಯುಕ್ತಳಿಗೆ ಸಿಗಬೇಕಾದ 90 ಅಂಕಗಳ ಪೈಕಿ 50 ಅಂಕಗಳು ಮಂಗ ಮಾಯವಾಗಿವೆ. ಮೌಲ್ಯ ಮಾಪಕರು ಮಾಡಿರುವ ಎಡವಟ್ಟಿಗೆ ಪೊಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಆಕೆಗೆ 50 ಅಂಕ ಕಡಿಮೆ ಬಂದರೂ 50 ಅಂಕವನ್ನು ಮುಂದೆ ಅಂಕ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಕೇವಲ 6 ಅಂಕವನ್ನಷ್ಟೆ ಸೇರ್ಪಡೆ ಮಾಡಬಹುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ ಎಂಬುವುದು ಪೋಷಕರಿಗೆ ತಿಳಿದಿರುವ ಮಾಹಿತಿ. ಇನ್ನು ಈ ನಡುವೆ ಆಕೆ ಭವಿಷ್ಯದಲ್ಲಿ ವೈದ್ಯೆಯಾಗುವ ಕನಸು ಕಂಡಿದ್ದು ಸಿ.ಇ.ಟಿ ಮತ್ತು ನೀಟ್ ಪರೀಕ್ಷೆ ಬರೆದಿದ್ದಾಳೆ. ಆದರೆ, ಕನ್ನಡ ವಿಷಯದ ಅಂಕಗಳು ಆಕೆಗೆ ಇದೀಗ ಕಗ್ಗಂಟಾಗಿದೆ.
ಒಟ್ಟಿನಲ್ಲಿ ವಿದ್ಯಾರ್ಥಿಗಳು ಸಮರ್ಪಕವಾಗಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸದೆ ಪರೀಕ್ಷೆಗಳನ್ನು ಎದುರಿಸದಿರೂವುದು, ಒಂದೆಡೆಯಾದರೆ, ಸಮರ್ಪಕ ತಯಾರಿಯೊಂದಿಗೆ ಪರೀಕ್ಷೆ ಬರೆದಂತಹ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಅವುಗಳಗೆ ಯಾರು ಹೊಣೆ ಅನ್ನೋದಕ್ಕೆ ಇಲಾಖೆ ಉತ್ತರಿಸಬೇಕಿದ್ದು, ವಿದ್ಯಾರ್ಥಿನಿ ಯುಕ್ತಳಿಗೆ ನ್ಯಾಯ ಒದಗಿಸಬೇಕಾಗಿದೆ.