ಉಡುಪಿ,ಮೆ09(DaijiworldNews/AZM):ಎಚ್1ಎನ್1 ರೋಗದಿಂದ ಬಳಲುತ್ತಿದ್ದ ಯುವ ಪತ್ರಕರ್ತೆಯೊಬ್ಬರು ಮೃತಪಟ್ಟಿರುವ ಘಟನೆ ಬುಧವಾರ ಉಡುಪಿಯಲ್ಲಿ ನಡೆದಿದೆ.
ಸಾಸ್ತಾನ ಗುಂಡ್ಮಿಯ ಅರ್ಚನಾ ಗುಂಡ್ಮಿ ಮೃತಪಟ್ಟ ಯುವ ಪತ್ರಕರ್ತೆ. ಎಚ್1ಎನ್1 ಖಾಯಿಲೆ ಚಿಕಿತ್ಸೆಗೆ ಕಳೆದ 18 ದಿನಗಳ ಹಿಂದೆ ಉಡುಪಿ ಖಾಸಗಿ ಆಸ್ಪತ್ರೆ ಗೆ ಅರ್ಚನಾ ಎಂಬವರು ದಾಖಲಾಗಿದ್ದರು.ಅರಂಭದಲ್ಲಿ ರಿಪೋರ್ಟ್ ತೆಗೆದ ಆಸ್ಪತ್ರೆಯ ವೈದರು ಎಚ್1ಎನ್1 ಇಲ್ಲ ಎಂದು ಕುಟುಂಬಸ್ಥರ ಬಳಿ ತಿಳಿಸಿದ್ದರೂ ಕೂಡಾ ಬಳಿಕ ಬಂದ ರಿಪೋರ್ಟಿನಿಂದ ಎಚ್1ಎನ್1 ಇರುವುದರ ಬಗ್ಗೆ ಪತ್ತೆಯಾಗಿ ಉತ್ತಮ ಚಿಕಿತ್ಸೆ ಮುಂದುವರಿಯುತ್ತಿದ್ದು, ಅರ್ಚನಾ ಎಂಬವರು ಚೇತರಿಸಿಕೊಂಡಿದ್ದರು. ಚಿಕಿತ್ಸೆಗಾಗಿ ಸುಮಾರು 2 ಲಕ್ಷದವರೆಗೆ ಭರಿಸಿದ್ದು, ಬಳಿಕ ಅಯೂಷ್ಮಾನ್ ಭಾರತ್ ಕಾರ್ಡ್ ಮೂಲಕ ಚಿಕಿತ್ಸೆ ಮುಂದುವರೆಸಲು ಕುಟುಂಬಸ್ಥರು ಮುಂದಾಗಿದ್ದರು. ಈ ಕಾರಣದಿಂದ ಅಸ್ಪತ್ರೆ ಅಡಳಿತ ಮಂಡಳಿ ಚಿಕಿತ್ಸೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಅರ್ಚನಾ ಸಾವಿಗೆ ಕಾರಣವಾಯಿತು ಎನ್ನುವುದು ಕುಟುಂಬಸ್ಥರ ಆರೋಪ.
ಈ ಕುರಿತು ವೈದ್ಯರ ಜೊತೆ ಮಾತನಾಡಿದಾಗ ವೈದ್ಯರು ಕೂಡಾ ಉಡಾಫೆಯ ಮಾತುಗಳನ್ನು ಆಡುತ್ತಿದ್ದಾರೆ ಎಂದೂ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಅರ್ಚನಾ ಎಂಬವರು ಗರ್ಭಿಣಿಯಾಗಿದ್ದು, ಅವರ ಸಾವಿನಿಂದ ಹೊಟ್ಟೆಯಲ್ಲಿದ್ದ ಮಗುವು ಕೂಡಾ ಮೃತಪಟ್ಟಿದೆ ಎಂದು ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ.