ಉಡುಪಿ, ಮೇ 09 (Daijiworld News/MSP): ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ಅನಧಿಕೃತವಾಗಿ ಬ್ಯಾನರ್, ಕಟೌಟ್, ಫ್ಲೆಕ್ಸ್ ಗಳನ್ನು ಅಳವಡಿಸಿ ವಾಹನ ಸಂಚಾರ ಹಾಗೂ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆ ಪಡಿಸುತ್ತಿರುವುದು ಕಂಡುಬಂದಿದೆ.
ಹೊಟೇಲ್, ಅಂಗಡಿ ಹಾಗೂ ಇತರೆ ವಾಣಿಜ್ಯ ಕಟ್ಟಡಗಳ ಮಾಲಕರು ಅನುಮತಿ ಪಡೆಯದೇ ಸಾರ್ವಜನಿಕ ಖಾಸಗಿ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್ ಜಾಹಿರಾತು ಫಲಕಗಳನ್ನು ಅಳವಡಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಕೇಳಿ ಬರುತ್ತಿದ್ದು, ಅಂತಹ ಜಾಹೀರಾತು ಫಲಕಗಳನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಪ್ರಚಾರಗಳ ಬ್ಯಾನರ್ ಕಟೌಟ್, ಫ್ಲೆಕ್ಸ್ ಗಳನ್ನು ಜಾಹೀರಾತು ಫಲಕ- ಸಾರ್ವಜನಿಕ ಖಾಸಗಿ ಸ್ಥಳಗಳಲ್ಲಿ ಅಳವಡಿಸುವ ಮುಂಚಿತವಾಗಿ ನಗರಸಭೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದು, ಅನುಮತಿ ಸಂಖ್ಯೆ ಮತ್ತು ಅವಧಿಯನ್ನು ದಾಖಲಿಸಿ ಅಳವಡಿಸತಕ್ಕದ್ದು. ಪ್ಲಾಸ್ಟಿಕ್ ಬಳಕೆ ನಿಷೇಧ ಆಗಿರುವುದರಿಂದ ಬಟ್ಟೆ ಬ್ಯಾನರ್ಗಳನ್ನು ಮಾತ್ರ ಬಳಸುವಂತೆ ಸೂಚಿಸಿದೆ.
ಈ ಪ್ರಕಟಣೆ ಹೊರಡಿಸಿದ 3 ದಿನಗಳ ಒಳಗೆ ಅಂತಹ ಯಾವುದೇ ಅನುಮತಿ ರಹಿತ ಜಾಹೀರಾತು ಫಲಕಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸ್ಥಳದಲ್ಲಿದ್ದಾಗ್ಯೂ ತೆರವುಗೊಳಿಸತಕ್ಕದ್ದು. ಇಲ್ಲವಾದಲ್ಲಿ ಸೂಕ್ತ ದಂಡನೆ ವಿಧಿಸಿ ಅನಧಿಕೃತವಾಗಿ ಅಳವಡಿಸಿ ಸಾರ್ವಜನಿಕ ಸ್ಥಳ ವಿರೂಪಗೊಳಿಸುವಿಕೆ ಕುರಿತು ಕರ್ನಾಟಕ ಪುರಸಭಾ ನಿಯಮದಂತೆ ಕ್ರಮ ಜರುಗಿಸಲಾಗುವುದು. ಇದರ ಕಷ್ಟ ನಷ್ಟಗಳಿಗೆ ಸಂಬಂಧಿಸಿದ ಮಾಲಕರೇ ಜವಾಬ್ದಾರರಾಗಿರುತ್ತಾರೆ ಎಂದು ಉಡುಪಿ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.