ಮೈಸೂರು, ನ 21: ಇವರದು ಇಳಿ ವಯಸ್ಸು. ಹಣ್ಣು ಹಣ್ಣು ಮುದುಕಿ. ಇವರಲ್ಲಿ ಕೆಲಸ ಮಾಡುವಷ್ಟು ಸಾಮರ್ಥ್ಯವಿಲ್ಲ. ಮನೆ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು ಅನಾರೋಗ್ಯ ಬಂದಾಗ ಜೀವನ ನಡೆಸಲು ಕಂಡುಕೊಂಡ ದಾರಿ ಭಿಕ್ಷಾಟನೆ.
ಹೌದು, ಸುಮಾರು 85 ವರ್ಷ ಪ್ರಾಯದ ಈ ಅಜ್ಜಿಯ ಹೆಸರು ಸೀತಾಲಕ್ಷ್ಮಿ. ಈ ಅಜ್ಜಿಗೆ ಯಾರ ಮೇಲೂ ಅವಲಂಬಿತರಾಗಿ ಬದುಕಲು ಇಷ್ಟವಿಲ್ಗ. ಅದಕ್ಕಾಗಿ ಇವರು ಮೈಸೂರಿನ ಒಂಟಿಕೊಪ್ಪಲುವಿನ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ 10 ವರುಷಗಳಿಂದ ಭಿಕ್ಷೆ ಬೇಡುತ್ತಿದ್ದರು.
ಭಿಕ್ಷೆಯಿಂದ ಬಂದ ಹಣದಲ್ಲಿ ತಮ್ಮ ಖರ್ಚು ತೆಗೆದು ಉಳಿದ ಹಣವನ್ನು ಬ್ಯಾಂಕಿನಲ್ಲಿ ಉಳಿತಾಯ ಮಾಡುತ್ತಿದ್ದರು. ತಮ್ಮ ಬಳಿ ಹಣವನ್ನು ಇಟ್ಟುಕೊಳ್ಳಲು ಬಯಸದ ಅಜ್ಜಿ ಇದೀಗ ಯಾವ ದೇವಾಲಯದ ಮುಂದೆ ಕೂತು ಭಿಕ್ಷೆ ಬೇಡುತ್ತಿದ್ದರೋ ಅದೇ ದೇವಾಲಯಕ್ಕೆ ಹಣವನ್ನು ದಾನ ಮಾಡಿದ್ದಾರೆ. ಭಿಕ್ಷೆಯಿಂದ ಬಂದ ಹಣದಲ್ಲಿ 2.5 ಲಕ್ಷ ರೂ.ಗಳನ್ನು ದೇವಸ್ಥಾನದ ಅಭಿವೃದ್ಧಿಗೆಂದುದಾನ ಮಾಡಿ, ಎಲ್ಲರಿಂದಲೂ ಪ್ರಶಂಸೆ ಪಡೆದುಕೊಂಡಿದ್ದಾರೆ. ಮುಂಬರುವ ಹನುಮ ಜಯಂತಿಯಂದು ಪ್ರಸಾದ ವಿನಿಯೋಗಕ್ಕೆ ಭಿಕ್ಷೆ ಬೇಡಿದ ಹಣವನ್ನು ದಾನ ನೀಡುವುದು ಈಕೆಯ ಮಹದಾಸೆ.