ಮಂಗಳೂರು, ಮೇ 09 (Daijiworld News/MSP): ಬೇಸಿಗೆಯಲ್ಲಿ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಹಾಹಾಕಾರ ಒಂದೆಡೆಯಿದ್ದರೆ, ಇನ್ನೊಂದೆಡೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಿಂದಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ರಕ್ತದ ಕೊರತೆ ಉಂಟಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಲವು ಸಂಘಟನೆಗಳಿಗೆ ರಕ್ತದಾನ ಶಿಬಿರ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಇದೇ ರಕ್ತದ ಕೊರತೆ ಉಂಟಾಗಲು ಕಾರಣವಾಗಿದೆ. ರಕ್ತದ ಕೊರತೆಯಿಂದ ಕೆಲವು ಗುಂಪುಗಳ ರಕ್ತ ದೊರೆಯದೆ ರೋಗಿಗಳ ಸಂಬಂಧಿಕರು ಪರದಾಡುತ್ತಿದ್ದಾರೆ. ನೀತಿ ಸಂಹಿತೆ ಹಿನ್ನಲೆಯಲ್ಲ್ಲಿ ರಕ್ತದ ಕೊರತೆ ಕಾಣಿಸಿಕೊಳ್ಳಬಹುದು ಎಂದು ಸಾಕಷ್ಟು ರಕ್ತ ಸಂಗ್ರಹ ಮಾಡಿ ಇಟ್ಟಿದ್ದರಿಂದ ಸಮಸ್ಯೆಯಾಗಿರಲಿಲ್ಲ. ಆದರೆ ಬಳಿಕ ರಕ್ತದಾನ ಶಿಬಿರಗಳು ಕಡಿಮೆಯಾಗಿ ರಕ್ತದ ಕೊರತೆಯಾಗುತ್ತಿದೆ .
ವೆನ್ಲಾಕ್ ರಕ್ತನಿಧಿ, ಲೇಡಿಗೋಷನ್ ನಲ್ಲಿರುವ ರೆಡ್ ಕ್ರಾಸ್ ರಕ್ತನಿಧಿ ಜತೆಗೆ ಕೆಎಂಸಿ ಆಸ್ಪತ್ರೆಯ ರಕ್ತನಿಧಿಯಲ್ಲಿ ಕೊರತೆಯುಂಟಾಗಿದೆ. ಮುಖ್ಯವಾಗಿ ಎಬಿ ನೆಗೆಟಿವ್, ಎ ನೆಗೆಟಿವ್ , ಮೊದಲಾದ ವಿರಳ ಗುಂಪುಗಳ ರಕ್ತ ಸಿಗುತ್ತಿಲ್ಲ. ಕಾಲೇಜುಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಎನ್ನೆಸ್ಸೆಸ್, ಎನ್ ಸಿಸಿ ಸೇರಿದಂತೆ ವಿವಿಧ ಸಂಘಟನೆ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳು ರಕ್ತದಾನಕ್ಕೆ ಮುಂದಾಗುವುತ್ತಿಲ್ಲ. ಜತೆಗೆ ರಜೆಯ ಸೀಜನ್ ಬೇರೆ. ಹೀಗಾಗಿ ಕ್ಯಾಂಪ್ ಗಳು ಕೂಡಾ ಕಡಿಮೆ ಆಗಿ ರಕ್ತದ ಕೊರತೆಗೆ ಕಾರಣವಾಗಿದೆ.
ಇನ್ನು ನಗರದ ಕೆಎಂಸಿ ಆಸ್ಪತ್ರೆಯಲಿಯೂ ರಕ್ತಕ್ಕೆ ಕೊರತೆ ಕಂಡುಬಂದಿರುವುದರಿಂದ ಶಾಸಕ ವೇದವ್ಯಾಸ್ ಕಾಮತ್ ಮೇ 09 ರ ಮಂಗಳವಾರ ಖುದ್ದು ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದರು.