ಮಂಗಳೂರು, ಮೇ 09 (Daijiworld News/MSP): ನಿಯಮವನ್ನು ಪಾಲಿಸದೆ ಮೀನು ಸಾಗಾಟ ಮಾಡಿರುವುದು ಕಂಡುಬಂದರೆ, ಅಥವಾ ಮೀನು ಸಾಗಾಟದ ತ್ಯಾಜ್ಯ ರಸ್ತೆಗೆ ಸೋರಿಕೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಇದೀಗ ನುಡಿದಂತೆ ನಡೆದಿದ್ದಾರೆ. ನಿಯಮ ಪಾಲಿಸದೆ ನಗರದಲ್ಲಿ ಮೀನು ನೀರಿನ ತ್ಯಾಜ ರಸ್ತೆಗೆ ಸುರಿಯುವಂತೆ ಸಾಗಾಟ ಮಾಡುತ್ತಿದ್ದ ಆರು ಮೀನು ಸಾಗಾಟ ವಾಹನಗಳನ್ನು ಮೇ 9 ರ ಗುರುವಾರ ಬೆಳಗ್ಗೆ ವಶಪಡಿಕೊಂಡಿದ್ದಾರೆ.
ನಗರದ ಮೀನುಗಾರಿಕಾ ಬಂದರಿನಿಂದ ವಿವಿಧ ಕಡೆಗಳಿಗೆ ಮೀನು ಸಾಗಾಟ ಮಾಡುವ ಲಾರಿ, ಟೆಂಪೋಗಳು ಹಸಿರು ನ್ಯಾಯ ಪೀಠ 2015ರಲ್ಲಿ ಹೊರಡಿಸಿದ ಆದೇಶವನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಯಾವುದೇ ಕಾರಣಕ್ಕೂ ಮೀನು ನೀರಿನ ತ್ಯಾಜ್ಯ ರಸ್ತೆಗೆ ಬಿಡುವಂತಿಲ್ಲ ಎಂದು ಲಾರಿ ಮಾಲೀಕರಿಗೆ ಪೊಲೀಸ್ ಇಲಾಖೆ ಮೇ 6ರಂದು ನೋಟಿಸು ನೀಡಿತ್ತು. ಇದರ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ.
ಹಸಿರು ಪೀಠದ ಆದೇಶದಲ್ಲಿ ತಿಳಿಸಿರುವಂತೆ ಮೀನಿನ ಲಾರಿಗಳ ತ್ಯಾಜ್ಯ ನೀರು ಯಾವುದೇ ಕಾರಣಕ್ಕೂ ರಸ್ತೆಗೆ ಬೀಳಬಾರದು, ಮೀನುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಒಯ್ಯುವಾಗ ಕ್ರೇಟ್ ಬಳಸಬೇಕು ಮತ್ತು ಮಂಜು ನೀರು ಕೆಳಗೆ ಬೀಳುವಂತಿಲ್ಲ, 1ಟನ್ ಮೀನು ಸಾಗಾಟ ಮಾಡುವ ವಾಹನದಲ್ಲಿ 50 ಲೀಟರ್ ತ್ಯಾಜ್ಯ ನೀರು ಸಂಗ್ರಹಕ್ಕೆ ಟ್ಯಾಂಕ್ ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಿತ್ತು. ಮಾತ್ರವಲ್ಲದೆ ಈ ಆದೇಶಗಳನ್ನು ಪಾಲನೆ ಮಾಡುವಂತೆ ನಗರ ಪೊಲೀಸರು ಲಾರಿ ಮಾಲೀಕರಿಗೆ ಮೇ 6ರಂದು ನೋಟಿಸ್ ಹೊರಡಿಸಿದ್ದರು. ನೋಟಿಸ್ ನೀಡಿದ ಬಳಿಕವೂ ಮುಂದುವರಿದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಕಮಿಷನರ್ ತಿಳಿಸಿದ್ದರು.