ಕಾಸರಗೋಡು, ನ 21: ಹಣಕಾಸು ಸಂಸ್ಥೆ ಯಿಂದ ಬಡ್ಡಿ ರಹಿತ ಸಾಲ ನೀಡುವುದಾಗಿ ಹಲವರಿಂದ ಕೋಟ್ಯಾ೦ತರ ರೂ . ಮೌಲ್ಯದ ಚಿನ್ನಾಭರಣ ಸಹಿತ ಮಲಪ್ಪುರಂ ನಿಂದ ಪರಾರಿಯಾಗಿದ್ದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಲಪ್ಪುರಂ ಕೊಂಡೊಟ್ಟಿಯ ಜಲಾಲುದ್ದೀನ್ ( 32) ಎಂದು ಗುರುತಿಸಲಾಗಿದೆ.
ಕೆಲ ವರ್ಷಗಳ ಹಿಂದೆ ಈತ ಸಹೋದರನಿಗೆ ತಿಳಿಯದೆ ಸಹೋದರನ ಹೆಸರಿನಲ್ಲಿ ಕೊಂಡೊಟಿಯಲ್ಲಿ ಹಣಕಾಸು ಸಂಸ್ಥೆ ಆರಂಭಿಸಿದ್ದು, ಬಳಿಕ ಈತ ಹಲವರಿಂದ ಚಿನ್ನಾಭರಣ ಪಡೆದು ಬಡ್ಡಿ ರಹಿತ ಸಾಲ ನೀಡುತ್ತಿದ್ದನು.
ಮಹಿಳೆಯರು ಸೇರಿದಂತೆ ಹಲವಾರು ಮಂದಿ ಕೋಟ್ಯಾಂತರ ರೂಗಳ ಚಿನ್ನಾಭರಣವನ್ನು ಅಡವಿರಿಸಿದ್ದು, ಬಳಿಕ ಈತ ಚಿನ್ನಾಭರಣ ಸಹಿತ ತಲೆಮರೆಸಿಕೊಂಡಿದ್ದನು.ಘಟನೆ ಬಳಿಕ ಮಲಪ್ಪುರಂ ಪೊಲೀಸರು 2014 ರ ಡಿ . 12 ರಂದು ಕಾಸರಗೋಡಿನಿಂದ ಜಲಾಲುದ್ದೀನ್ ನನ್ನು ವಶಕ್ಕೆ ತೆಗೆದುಕೊಂಡರೂ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು .ಬಳಿಕ ಈತನ ಪತ್ತೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.