ಮಂಗಳೂರು, ಮೇ09(Daijiworld News/SS): ನಗರದ ಹೊರವಲಯದ ಬಜಪೆ ಸಮೀಪದ ಪಡುಪೆರಾರ ಎಂಬಲ್ಲಿ ನಡೆದ ಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಪಡುಪೆರಾರ ನಿವಾಸಿ ಮಹೇಂದ್ರ ಯಾನೆ ಮಯ್ಯು (31) ಬಂಧಿತ ಆರೋಪಿ.
ಬಜಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತನಿಂದ ಲಕ್ಷಾಂತರ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಪಡುಪೆರಾರದ ಗೋಪಾಲಗೌಡ ಮತ್ತು ಪಿ.ಕೆ. ಹರಿ ಶಿಬರಾಯರ ಮನೆಯಿಂದ ಮಹೇಂದ್ರ ಯಾನೆ ಮಯ್ಯು ಲಕ್ಷಾಂತರ ಮೌಲ್ಯದ ಅಡಕೆಯನ್ನು ಕಳವು ಮಾಡಿದ್ದಾನೆ.
ಪಡುಪೆರಾರ ಗೋಪಾಲಗೌಡರ ಮನೆಯಿಂದ ಅಡಕೆಯ 26 ಗೋಣಿಚೀಲಗಳು ಕಳವಾಗಿದ್ದರೆ, ಪಡುಪೆರಾರದ ಪಿ.ಕೆ. ಹರಿ ಶಿಬರಾಯರ ಮನೆಯಿಂದ ಸುಮಾರು ಮೂರು ಕ್ವಿಂಟಾಲ್ ತೂಕದ 9 ಗೋಣಿ ಅಡಿಕೆ ಚೀಲಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಜಪೆ ಠಾಣಾ ಇನ್ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತನು ಈ ಎರಡೂ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಸುಮಾರು 600 ಕೆ.ಜಿ ಅಡಕೆಯನ್ನು ಮತ್ತು ಕಳವು ಮಾಡಲು ಉಪಯೋಗಿಸಿ ಪೋರ್ಡ್ ಕಾರ್ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 11,20,000 ಮೌಲ್ಯ ಎಂದು ತಿಳಿದು ಬಂದಿದೆ.