ಮಂಗಳೂರು, ಮೇ09(Daijiworld News/SS): ನಗರದಲ್ಲಿರುವ ಪ್ರತಿಷ್ಠಿತ ಕಂಪನಿಯ ಹೆಸರು ಹೇಳಿಕೊಂಡು ಉದ್ಯೋಗ ಆಮಿಷ ಒಡ್ಡಿ ಹಲವರಿಗೆ ವಂಚಿಸುತ್ತಿದ್ದ ಯುವಕನೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಹೊರವಲಯದ ಪಡುಪೆರಾರ ನಿವಾಸಿ ರಾಮ್ಪ್ರಸಾದ್ ರಾವ್ ಬಂಧಿತ ಆರೋಪಿ.
ಓಎನ್'ಜಿಸಿ ಕಂಪನಿಯಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ 22.75 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಆರೋಪದಲ್ಲಿ ಪಡುಪೆರಾರ ನಿವಾಸಿ ರಾಮ್ಪ್ರಸಾದ್ ರಾವ್ನನ್ನು ಬಜ್ಪೆ ಪೊಲೀಸರು ಮೂಡುಪೆರಾರ ಎಂಬಲ್ಲಿ ಬಂಧಿಸಿದ್ದಾರೆ.
ರಾಮ್ಪ್ರಸಾದ್ ಓಎನ್'ಜಿಸಿ ಪೆಟ್ರೊಕೆಮಿಕಲ್ ಕಂಪೆನಿಯ ನಕಲಿ ಐಡೆಂಟಿಟಿ ಕಾರ್ಡ್ ಮತ್ತು ಮುದ್ರೆ ತಯಾರಿಸಿ ಎಚ್ಆರ್ ಅಧಿಕಾರಿ ಎಂದು ಹೇಳಿಕೊಂಡು, ಹಲವಾರು ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿದ್ದ ಎಂದು ಆರೋಪಿಸಲಾಗಿದೆ. ಈಗಾಗಲೇ 13 ಯುವಕರಿಂದ 22.75 ಲಕ್ಷ ರೂಪಾಯಿಯನ್ನು ಅರೋಪಿ ರಾಮ್ ಪ್ರಸಾದ್ ರಾವ್ ಪಡೆದುಕೊಂಡಿದ್ದನು.
ಕಂಪನಿಯ ನಕಲಿ ಲೋಗೊ ಹಾಗೂ ಉದ್ಯೋಗದ ಅರ್ಜಿಯನ್ನು ತಯಾರಿಸಿ ಯುವಕರಿಂದ ಹಣ ಪಡೆದು ಅರ್ಜಿಗಳನ್ನು ಹಂಚಿದ್ದನು. ಜೊತೆಗೆ ನಕಲಿ ಇ-ಮೇಲ್ ಸೃಷ್ಟಿಸಿ ಅರ್ಜಿಗಳನ್ನು ತರಿಸಿಕೊಂಡಿದ್ದನು. ಕಂಪನಿಯ ಪ್ರಧಾನ ವ್ಯವಸ್ಥಾಪಕರ ಹೆಸರಲ್ಲಿ ಸೀಲ್ ಹಾಕಿ ಯುವಕರಿಗೆ ನೇಮಕಾತಿ ಪತ್ರಗಳನ್ನು ಕಳುಹಿಸಿ ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ.
ಬಂಧಿತ ರಾಮ್ಪ್ರಸಾದ್ ರಾವ್ನಿಂದ ಕೃತ್ಯಕ್ಕೆ ಬಳಸಿದ ಸಿಪಿಯು-ಕೀಬೋರ್ಡ್, ಎಲ್ಇಡಿ ಮಾನಿಟರ್, ಕಲರ್ ಪ್ರಿಂಟರ್, ನಕಲಿ ಸೀಲ್ಗಳು, ನಕಲಿ ಐಡೆಂಟಿಟಿ ಕಾರ್ಡ್, ಮೊಬೈಲ್ ಹಾಗೂ ಸಿಮ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.