ಮಂಗಳೂರು ನ 21 : ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ಸಿದ್ಧಗೊಂಡ ಹಾಸ್ಯ ಪ್ರಧಾನ "ಅಂಬರ್ ಕ್ಯಾಟರರ್ಸ್' ತುಳು ಸಿನೆಮಾ ಸಿನಿಪ್ರೇಕ್ಷಕರಿಗೆ ಹಾಸ್ಯದ ಕಚಗುಳಿಯಿಡಲು ನ. 24ರಂದು ಕರ್ನಾಟಕ ಕರಾವಳಿಯಾದ್ಯಾಂತ ಬಿಡುಗಡೆಗೊಳ್ಳಲಿದೆ ಎಂದು ಸಿನೆಮಾ ನಿರ್ಮಾಪಕ ಕಡಂದಲೆ ಸುರೇಶ್ ಎಸ್. ಭಂಡಾರಿ ತಿಳಿಸಿದರು.
ನಗರದ ಪ್ರಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಸುರೇಶ್ ಎಸ್. ಭಂಡಾರಿ, ಅಂಬರ್ ಕ್ಯಾಟರರ್ಸ್ ಮೂಲಕ ತುಳುಚಿತ್ರರಂಗಕ್ಕೆ ನನ್ನ ಸುಪುತ್ರ, ಚಲನಚಿತ್ರ ರಂಗದ ಹೊಸ ಪ್ರತಿಭೆಯಾಗಿ ಸೌರಭ್ ಭಂಡಾರಿ ಅವರನ್ನು ಪರಿಚಯಿಸಿದ್ದೇವೆ ಎಂದರು. ಆದ್ದೂರಿ ಬಜೆಟ್ ನ ಚಿತ್ರ ಇದಾಗಿದ್ದು ಮಂಗಳೂರಿನ ಜ್ಯೋತಿ, ಪಿವಿಆರ್, ಸಿನಿ ಪೊಲಿಸ್, ಬಿಗ್ ಸಿನಿಮಾಸ್ ಸೇರಿದಂತೆ ಒಟ್ಟು 13 ಥಿಯೇಟರ್ ಗಳಲ್ಲಿ ಸಿನಿಮಾ ಏಕಕಾಲಕ್ಕೆ ತುಳುವಿನ 86 ನೇ ಚಿತ್ರ ಅಂಬರ್ ಕ್ಯಾಟರರ್ಸ್ ತೆರೆ ಕಾಣಲಿದೆ ಎಂದರು.
ಸ್ಯಾಂಡಲ್ವುಡ್ನ ನಟಿ ಸಿಂಧು ಲೋಕನಾಥ್ ನಾಯಕಿಯಾಗಿ, ಹಿರಿಯತಾರೆ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ದನ್, ಕರಾವಳಿಯ ಅನುಭವಿ ರಂಗನಟ ಮತ್ತು ಸಿನೆಮಾ ತಾರೆಯರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ ಇವರ ಅಭಿನಯದಲ್ಲಿ ಈ ಚಿತ್ರ ನಿರ್ಮಿಸಲಾಗಿದೆ. ಚಿತ್ರದ ತಾಂತ್ರಿಕ ವರ್ಗದಲ್ಲೂ ನುರಿತ ವ್ಯಕ್ತಿಗಳನ್ನೇ ಆರಿಸಿಕೊಂಡಿದ್ದೇವೆ. ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕಣ್ಣಿನಲ್ಲಿ ಇಡೀ ಸಿನಿಮಾ ಮೂಡಿ ಬಂದಿದ್ದು, ಪ್ರತಿಯೊಂದು ದೃಶ್ಯ ಕೂಡಾ ಕಣ್ಣಿಗೆ ಮುದ ನೀಡಲಿದೆ.
ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ. ಅದರಲ್ಲೂ ಬಾಲಿವುಡ್ ಸಂಗೀತ ನಿರ್ದೇಶಕ ಮತ್ತು ಗಾಯಕ ಶಂಕರ್ ಮಹಾದೇವನ್ ಹಾಡಿರುವ ಜೈ ಹನುಮಾನ್ ಮತ್ತು ವಿಸ್ಮಯ ವಿನಾಯಕ್ ಹಾಡಿರುವ ಲಿಂಗುನ ಪುಲ್ಲಿನ ಹಾಡುಗಳು ಹಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ . ಒಟ್ಟಾರೆಯಾಗಿ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಫ್ಯಾಮಿಲಿ ಸಮೇತ ನೋಡುವ ಚಿತ್ರ ಇದಾಗಿದೆ ಎಂದರು.