ಉಡುಪಿ, ಮೇ.10(Daijiworld News/SS): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗಿಂತ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂದು ಸಚಿವ ಜಯಮಾಲ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 23ರ ನಂತರವೂ ನಾವು ಹೀಗೆ ಇರುತ್ತೇವೆ. ಯಾವುದೇ ಸಮಸ್ಯೆ ಆಗಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗಿಂತ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಬರದ ಸಮಸ್ಯೆಯ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನನ್ನ ಹಾಗೆ ಎಲ್ಲ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ತೆರಳಿ ಬರ ಸಮಸ್ಯೆಯನ್ನು ಪರಿಶೀಲನೆ ಮಾಡಿದ್ದಾರೆ. ನಾವು ಮತ ಹಾಕಿದವರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ. ಮಾಡುವುದು ಕೂಡ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಎಲುಬಿಲ್ಲದ ನಾಲಗೆ ಏನು ಬೇಕಾದರೂ ಮಾತನಾಡುತ್ತದೆ. ಕನಸು ತುಂಬಾ ಜನ ಕಾಣುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಆಗಲ್ಲ. ಆಸೆ ಪಡುವರರು ಪಡಲಿ. ಪ್ರಜಾಪ್ರಭುತ್ವ ಯಾರೂ ಬೇಕಾದರೂ ಕನಸು ಕಾಣಬಹುದು ಎಂದರು.
ಸಿಎಂ ಪ್ರಕೃತಿ ಚಿಕಿತ್ಸೆ ತೆಗೆದುಕೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಚಿಕಿತ್ಸೆ ತೆಗೆದುಕೊಳ್ಳಬಾರದೆ. ಅವರಿಗೆ ಮಧುಮೇಹ ಇರಬಹುದು ಅಥವಾ ಬೇರೆ ಬೇರೆ ಆರೋಗ್ಯ ಸಮಸ್ಯೆ ಇರಬಹುದು. ಅದೆಲ್ಲ ಅವರ ಖಾಸಗಿ ಅಲ್ಲವೇ. ಪಾಪ ಅವರ ನೋವು ಅವರಿಗೆ ಗೊತ್ತಿರುತ್ತದೆ. ಹಗಲು-ಇರುಳು ಒಳ್ಳೆಯ ಕೆಲಸ ಮಾಡಿದಾಗ ದೇಹ ದಣಿಯುವುದಿಲ್ಲವೇ. ಅವರದ್ದು ಕೂಡ ದೇಹ ಅಲ್ಲವೇ. ಸಿಎಂ ಬಗ್ಗೆ ಹೀಗೆಲ್ಲಾ ಯಾಕೆ ಮಾತನಾಡುತ್ತೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಮಾಧ್ಯಮದವರನ್ನು ಪ್ರಶ್ನಿಸಿದರು.