ಮಂಗಳೂರು, ಮೇ 10 (Daijiworld News/SM): ಕೃತಕ ನೆರೆಯ ಸಮಸ್ಯೆ ಉದ್ಭವವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರು ನಗರ ದಕ್ಷಿಣದಲ್ಲಿರುವ ರಾಜಕಾಲುವೆಗಳು, ಬೃಹತ್ ಚರಂಡಿಗಳು ಮತ್ತು ಒಂದು ಮೀಟರ್ ಅಗಲದ ಚರಂಡಿಗಳಲ್ಲಿ ತುಂಬಿರುವ ಹೂಳು, ತ್ಯಾಜ್ಯವನ್ನು ಸಮರೋಪಾದಿಯಲ್ಲಿ ಸ್ವಚ್ಚ ಮಾಡುವ ಪ್ರಕ್ರಿಯೆ ನಡೆಯಬೇಕಿದ್ದು, ಅದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆ ವಹಿಸಬೇಕು. ಅದರಿಂದ ಮಳೆಗಾಲದಲ್ಲಿ ಉಂಟಾಗುವ ಕೃತಕ ನೆರೆಯಂತಹ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರು ನಗರದಲ್ಲಿರುವ ಡಿವೈಡರ್ ಗಳ ಪಕ್ಕದಲ್ಲಿ ಸಾಕಷ್ಟು ಮಣ್ಣು, ಮರಳು ಸೇರಿಕೊಂಡಿದೆ. ಹಾಗೇ ಅನೇಕ ಒಂದು ಮೀಟರ್ ಅಗಲದ ಚರಂಡಿಗಳಲ್ಲಿ ತುಂಬಿರುವ ಹೂಳುಗಳನ್ನು ತೆಗೆಯದೇ ಹಾಗೆ ಬಿಡಲಾಗಿದೆ. ಕೆಲವು ಕಡೆ ಹೂಳನ್ನು ತೆಗೆದು ಚರಂಡಿಗಳ ಮೇಲೆ ಹಾಕಿ ಹಾಗೆ ಬಿಡಲಾಗಿದೆ. ಅಲ್ಲಿಂದ ಸಾಗಿಸುವ ಪ್ರಕ್ರಿಯೆ ಮಾಡಲಾಗಿಲ್ಲ. ಬೃಹತ್ ಚರಂಡಿಗಳು ಮತ್ತು ರಾಜಕಾಲುವೆಗಳ ಹೂಳು ಕೆಲವು ಭಾಗಗಳಲ್ಲಿ ತೆಗೆಯಲಾಗಿದೆ ಬಿಟ್ಟರೆ ಪೂರ್ಣವಾಗಿ ಆರಂಭದಿಂದ ಅಂತ್ಯದವರೆಗೂ ತೆಗೆಯಲಾಗಿಲ್ಲ. ಇನ್ನು ಕೆಲವು ದಿನಗಳ ಒಳಗೆ ಮಂಗಳೂರಿನಲ್ಲಿ ಮಳೆಗಾಲ ಶುರುವಾಗಲಿದೆ. ಮೊದಲ ಮಳೆಗೆ ತ್ಯಾಜ್ಯಗಳು ಚರಂಡಿಗಳನ್ನು ಸೇರಿದರೆ ಅದು ಬಹಳ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ ಎಂದು ಶಾಸಕ ಕಾಮತ್ ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಾವು ನೇರವಾಗಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಕೆಲಸ ಮಾಡುವ ಹಾಗಿಲ್ಲ. ಆದ್ದರಿಂದ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಕರ್ತವ್ಯ ನಿರ್ವಹಿಸಬೇಕು. ವಾರದೊಳಗೆ ಎಲ್ಲೆಲ್ಲಿ ಹೂಳು ತೆಗೆಯುವ ಕೆಲಸ ಆಗಿಲ್ಲವೋ ಅದನ್ನು ಗುತ್ತಿಗೆದಾರರಿಂದ ಮಾಡಿಸಬೇಕು ಎಂದರು.