ಮಂಗಳೂರು, ನ 21: ಪಾಲಿಕೆ ವ್ಯಾಪ್ತಿಯಲ್ಲಿ 2018 ಜನವರಿಯೊಳಗೆ ಆರು ಇಂದಿರಾ ಕ್ಯಾಂಟಿನ್ ಹಾಗೂ ಒಂದು ಮಾಸ್ಟರ್ ಕಿಚನ್ ತೆರೆಯಲಾಗುವುದು ಎನ್ನುವ ಸುದ್ದಿಯ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಬಗ್ಗೆ ಇನ್ನೊಂದು ಸುದ್ದಿ ಹೊರಬಿದ್ದಿದೆ. ಬಡವರ ಹಸಿವು ನೀಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ 'ಇಂದಿರಾ ಕ್ಯಾಂಟೀನ್' ಕಾರ್ಯಕ್ಕೆ ಬ್ರಿಟಿಷ್ ಸುದ್ದಿವಾಹಿನಿ ಬಿಬಿಸಿ ಶಹಭಾಷ್ ನೀಡಿದೆ.ಈ ಸುದ್ದಿಯನ್ನು ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಟ್ವೀಟರ್ ಖಾತೆಯಲ್ಲಿ ರೀ ಟ್ವೀಟ್ ಮಾಡಿದ್ದಾರೆ. ಬಿಬಿಸಿ ವರದಿಗಾರ್ತಿಯಾಗಿರುವ ಗೀತಾ ಪಾಂಡೆ ಅವರು ಬೆಂಗಳೂರಿಗೆ ಆಗಮಿಸಿ ಈ ಹಿಂದೆ ಅಮ್ಮ ಕ್ಯಾಂಟೀನ್ ನಲ್ಲೂ ಊಟ ಮಾಡಿದ ಅನುಭವ ಉಲ್ಲೇಖಿಸಿ ಅಮ್ಮ ಕ್ಯಾಂಟೀನ್ ಉತ್ತಮ, ಇಂದಿರಾ ಕ್ಯಾಂಟೀನ್ ಅತ್ಯುತ್ತಮ ಎಂದು ತಮ್ಮ ಅನುಭವ ರೂಪದ ವರದಿ ಪ್ರಕಟಿಸಿದ್ದಾರೆ. ಕೇವಲ ಐದು ರೂ.ಗೆ ತಿಂಡಿ ಸಿಗಲಿದ್ದು, ಈ ಮುಂಚೆ 30 ರೂ. ಖಾಲಿ ಮಾಡುತ್ತಿದ್ದವರು ದಿನಕ್ಕೆ 25 ರೂ. ಉಳಿಸುವಂತಾಗಿದೆ. ಮೂರು ಹೊತ್ತಿನ ಊಟಕ್ಕೆ ಸುಮಾರು 140 ರೂ. ಖಾಲಿ ಮಾಡುತ್ತಿದ್ದವರು ಇದೀಗ ಕೇವಲ 40 ರೂ.ಖಾಲಿ ಮಾಡುತ್ತಿದ್ದು, ದಿನಕ್ಕೆ 100 ರೂ.ನಷ್ಟು ಉಳಿತಾಯ ಮಾಡುತ್ತಿದ್ದಾರೆ. ಇದರಿಂದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುವುದು ಬಿಬಿಸಿ ವಿಶ್ಲೇಷಿಸಿದೆ. ಬಡವರ ಹಸಿವು ನೀಗಿಸುವಲ್ಲಿ, ಸರಕಾರ ತೆಗೆದುಕೊಂಡಿರುವ ಕ್ರಮಕ್ಕೆ ಬಿಬಿಸಿ ಶಹಬ್ಬಾಸ್ ಎಂದು ಹೇಳಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ ಸ್ಪೂರ್ತಿ ನೀಡಿದೆ. ಸದ್ಯ ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೀತಾ ಪಾಂಡೆ