ಉಡುಪಿ, ಮೇ.10(Daijiworld News/SS): ಕೃಷ್ಣ ನಗರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ಹಿನ್ನೆಲೆಯಲ್ಲಿ, ಮಳೆಗಾಗಿ ಪ್ರಾರ್ಥಿಸಿ ಶ್ರೀ ಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ವರುಣನ ಕೃಪೆಗೆ ಬೇಡಿಕೊಂಡರು. ಈ ವೇಳೆ ಮಠದ ಅರ್ಚಕರು ಪರ್ಜನ್ಯ ಜಪ ಪಠಿಸಿದರು. ಮಳೆಗಾಗಿ ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮುಖ್ಯಪ್ರಾಣ, ಮಧ್ವಾಚಾರ್ಯರ ಮೂಲಸಂಸ್ಥಾನ ಹಾಗೂ ಸುಬ್ರಹಣ್ಯ ದೇವರ ಸನ್ನಿಧಿಯಲ್ಲೂ ಪೂಜೆ ಸಲ್ಲಿಸಲಾಯಿತು.
ಈ ವೇಳೆ, ಉಡುಪಿಯಲ್ಲಿ ನೀರಿಗೆ ಹಾಹಾಕಾರ ಇದೆ. ಜೀವಜಲಕ್ಕಾಗಿ ಜನರು ಹಾತೊರೆಯುತ್ತಿದ್ದಾರೆ. ಧಾರಾಕಾರವಾಗಿ ಮಳೆ ಸುರಿಯುವಂತೆ ಅನುಗ್ರಹಿಸಬೇಕು ಎಂದು ದೇವರಲ್ಲಿ ಯತಿಗಳು ಬೇಡಿಕೊಂಡರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜೀವನದಿ ಸ್ವರ್ಣ ಬತ್ತಿದ್ದು, ಶೀಘ್ರದಲ್ಲಿ ಮಳೆ ಬರುವಂತಾಗಲಿ ಎಂದು ಪಲಿಮಾರು ಶ್ರೀ, ಅದಮಾರು ಕಿರಿಯ ಶ್ರೀ ಹಾಗೂ ಶಿವಳ್ಳಿ ಪುರೋಹಿತರ ಸಂಘದಿಂದ ದೇವರಲ್ಲಿ ಪ್ರಾರ್ಥಿಸಲಾಯಿತು. ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎಂಬುದು ನಂಬಿಕೆ. ಅವಧಿಗೂ ಮುನ್ನವೇ ಮಳೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.