ಉಡುಪಿ,ಮೇ11(DaijiworldNews/AZM): ಬಿಸಿಲ ಬೇಗೆಯಲ್ಲಿ ಕುದಿಯುತ್ತಿರುವ ಕರಾವಳಿಗರಿಗೆ ಇನ್ನೆರಡು ದಿನ ಸ್ವಲ್ಪ ತಂಪೆರಗುವ ಸಾಧ್ಯತೆಗಳಿದ್ದು, ರವಿವಾರದಿಂದ 2 ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡದ ಪರಿಣಾಮ 2 ದಿನಗಳ ಕಾಲ ಕರಾವಳಿಯ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಅಲೆಗಳ ಅಬ್ಬರ ಹೆಚ್ಚಿದೆ. ಗುರುವಾರದಿಂದ ಅಲೆಗಳಲ್ಲಿ ವ್ಯತ್ಯಾಸ ಗೋಚರಿಸಿದ್ದು, ಶುಕ್ರವಾರ ಮತ್ತಷ್ಟು ಬಿರುಸುಗೊಂಡಿದೆ. ಆದರೆ ಮೀನುಗಾರಿಕೆ ಬೋಟುಗಳು ವಾಪಸಾಗಿರುವ ವರದಿಯಾಗಿಲ್ಲ.
ಅಲೆಗಳ ಏರಿಳಿತ ಹೆಚ್ಚಾಗಿದ್ದರಿಂದ ಶುಕ್ರವಾರ ಮಧ್ಯಾಹ್ನದ ಮೇಲೆ ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಟೂರಿಸ್ಟ್ ಬೋಟುಗಳ ಪ್ರಯಾಣವನ್ನು ನಿಲ್ಲಿಸಲಾಗಿತ್ತು. ಮಲ್ಪೆ ಬೀಚ್ನಲ್ಲೂ ಯಾವುದೇ ಜಲಸಾಹಸ ಕ್ರೀಡೆಗಳನ್ನು ನಡೆಸಲಾಗಲಿಲ್ಲ. ಹುಣ್ಣಿಮೆ ಸಮೀಪ ಅಲೆಗಳಲ್ಲಿ ಏರಿಳಿತ ಉಂಟಾಗುವುದು ಸಾಮಾನ್ಯ. ಹಾಗಾಗಿ ಇನ್ನೂ ನಾಲ್ಕೈದು ದಿನಗಳವರೆಗೆ ಸಮುದ್ರದಲ್ಲಿ ಈ ವ್ಯತ್ಯಾಸ ಇರುವ ಸಾಧ್ಯತೆ ಇದೆ ಎಂದು ಮೀನುಗಾರರು ತಿಳಿಸಿದ್ದಾರೆ.
ಇನ್ನು ಈ ಕುರಿತು ಪಣಂಬೂರು ಬೀಚ್ ಅಭಿವೃದ್ಧಿ ನಿಗಮದ ಸಿಇಒ ಯತೀಶ್ ಬೈಕಂಪಾಡಿಯವರು ಮಾತನಾಡಿ, .ಪಣಂಬೂರು ಬೀಚ್ ನಲ್ಲಿ ವಾಟರ್ ಗೇಮ್ ಹಾಗೂ ಪ್ರವಾಸಿಗರನ್ನು ಸಮುದ್ರದಲ್ಲಿ ಬಿಡುವ ಮುಂಚೆ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು ಎಂದು ತಿಳಿಸಿದ್ದಾರೆ.