ಉಡುಪಿ, ಮೇ 11 (Daijiworld News/SM): ಮಲ್ಪೆ ಬಂದರಿನಲ್ಲಿ ಭಾರೀ ಗಾತ್ರದ ಅಪರೂಪದ ಮೀನು ಬೆಸ್ತರ ಬಲೆಗೆ ಸಿಲುಕಿದೆ.
ಆಳ ಸಮುದ್ರ ಮೀನುಗಾರಿಕೆ ನಡೆಸುವ ದಿವ್ಯಾಂಶಿ ಎಂಬ ಹೆಸರಿನ ಬೋಟಿಗೆ ಬಂಪರ್ ಡ್ರಾ ಸಿಕ್ಕಂತಾಗಿದ್ದು, ಬೃಹತ್ ಮೀನು ಬಲೆಗೆ ಸಿಕ್ಕಿದೆ. ಇದರ ತೂಕವಂತು ಊಹಿಸಲು ಅಸಾಧ್ಯ. ನಾವು ನೀವು ಖರೀಧಿಸುವ ಮೀನು ಸಾಮಾನ್ಯ 10-20 ಕೆ.ಜಿ. ಭರ್ಜರಿಯಾಗಿದ್ದರೆ, ಈ ಮೀನು ಬರೋಬ್ಬರಿ, ಸಾವಿರದ ಇನ್ನೂರು ಕೆ.ಜಿ.ಗೂ ಅಧಿಕ ಭಾರವಿತ್ತು.
ಈ ಗಾತ್ರದ ಮೀನು ಸಿಗೋದು ಬಲು ಅಪರೂಪವೇ ಸರಿ. ಮಿಥುನ್ ಕುಂದರ್ ಈ ಬೋಟಿನ ಮಾಲಕರು. ಬಲೆಗೆ ಸಿಕ್ಕ ಈ ಗಜಗಾತ್ರದ ಮೀನನ್ನು ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯ್ತು. ಅಂತಿಮವಾಗಿ ಮೀನನ್ನು ಮೇಲೆತ್ತಲು ಕ್ರೈನ್ ಸಹಾಯ ಪಡೆಯಬೇಕಾಯಿತು. ಬಳಿಕ ಮಲ್ಪೆ ಬಂದರಿಗೆ ಸಾಗಿಸಲಾಯಿತು.
ಈ ಗಜಗಾತ್ರದ ಮೀನನ್ನು ನೋಡಲು ಮತ್ಸ್ಯಪ್ರಿಯರ ದಂಡೇ ನೆರೆದಿತ್ತು. ಮೀನುಗಾರರೇ ಗಿಜಿಗುಡುತ್ತಿರುವ ಮಲ್ಪೆಯಲ್ಲಿ ಈ ಗಜಗಾತ್ರದ ಮೀನು ಕೆಲಹೊತ್ತು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇಷ್ಟು ದೊಡ್ಡ ಮೀನನ್ನು ಕೊಳ್ಳುವರಾರು ಎಂದು ಜನ ಕುತೂಹಲದಿಂದ ನೋಡುತ್ತಿರುವಾಗಲೇ ಉಡುಪಿಯ ಮಾರುಕಟ್ಟೆಗೆ ಈ ಮೀನು ಸೇಲ್ ಆಗಿದೆ.