ಮಂಗಳೂರು,ಮೇ12(DaijiworldNews/AZM): ಮಂಗಳೂರಿನ ನಂದಿಗುಡ್ಡೆ ರಸ್ತೆ ಬಳಿ ಗೋಣಿಚೀಲದಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಮಹಿಳೆಯ ಅರ್ಧ ಮೃತದೇಹದ ಭಾಗ ಕಂಡುಬಂದಿದೆ.
ನಗರದ ಕೆಪಿಟಿ ಬಳಿಯಲ್ಲಿ ಹೆಲ್ಮೆಟ್ ಒಳಗೆ ಮಹಿಳೆಯ ರುಂಡ ಹಾಗೂ ಗೋಣಿ ಚೀಲದಲ್ಲಿ ಮಹಿಳೆಯ ಅರ್ಧ ಮೃತದೇಹದ ಭಾಗ ಪತ್ತೆಯಾಗಿತ್ತು. ಇದೀಗ ತುಂಡರಿಸಿದ ಮತ್ತಷ್ಟು ಮೃತದೇಹದ ಭಾಗ ನಂದಿಗುಡ್ಡೆಯ ರಸ್ತೆ ಬದಿಯಲ್ಲಿ ಕಂಡುಬಂದಿದೆ. ಮೃತದೇಹವನ್ನು ತುಂಡರಿಸಿ ಗೋಣಿ ಚೀಲದಲ್ಲಿ ಕಟ್ಟಿ ರಸ್ತೆಬದಿಗೆ ಎಸೆಯಲಾಗಿದೆ. ಹಾಗೂ ಮೃತದೇಹದ ಬಳಿ ಒಂದು ಬುರ್ಖಾ ಪತ್ತೆಯಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ 2 ದಿನಗಳ ಹಿಂದೆ ಕದ್ರಿ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿದ್ದು, ಅದೇ ಮಹಿಳೆಯ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ನಗ್ನ ಸ್ಥಿತಿಯಲ್ಲಿ ಮೃತದೇಹವಿದ್ದು, ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆಯೇ? ಎನ್ನುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಮಹಿಳೆಯನ್ನು ಕೊಲೆಮಾಡಿ ಕೆಲ ದಿನಗಳಾಗಿರುವ ಸಂಶಯ ವ್ಯಕ್ತವಾಗಿದ್ದು, ದೇಹ ಕೊಳೆತ ಸ್ಥಿತಿಯಲ್ಲಿತ್ತು. ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಈ ಬರ್ಬರ ಹತ್ಯೆಯ ಕುರಿತಾದ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ.