ಮಂಗಳೂರು,ಮೇ12(DaijiworldNews/AZM): ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಧಾನ ಪೀಠ ವಿವಾದಿತ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಅಂತಿಮ ವಿಚಾರಣೆಯನ್ನು ಸೋಮವಾರ(ನಾಳೆ) ನಡೆಸಲಿದ್ದು, ಕರಾವಳಿ ಹಾಗೂ ಮಲೆನಾಡಿನ ಜನರು ತೀರ್ಪಿಗಾಗಿ ಕಾಯುತ್ತಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಂದೆ 6ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು ಅವುಗಳಲ್ಲಿ ಎರಡು ಅರ್ಜಿಗಳು ಪ್ರಧಾನ ಪೀಠಕ್ಕೆ ತಲುಪಿ ಉಳಿದವು ಅನೇಕ ಕಾರಣಗಳಿಂದ ತಿರಸ್ಕೃತಗೊಂಡಿದ್ದವು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಇತರ ಕೆಲವು ಜಿಲ್ಲೆಗಳ ಜನರ ನೀರಿನ ಬವಣೆಯನ್ನು ತಗ್ಗಿಸಲು ನೇತ್ರಾವದಿ ನದಿಯ ಪ್ರಮುಖ ಉಪನದಿಗಳ ಹರಿವನ್ನು ತಿರುಗಿಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಯೋಜನೆಗೆ ಆಕ್ಷೇಪವೆತ್ತಿ ಸಲ್ಲಿಸಿದ ಅರ್ಜಿಗಳು ಇವಾಗಿದೆ. ಇದು ಕುಡಿಯುವ ನೀರು ಯೋಜನೆಯಲ್ಲ ಬದಲಾಗಿ ನೀರಾವರಿ ಯೋಜನೆ ಎಂಬುದು ಸರ್ಕಾರದ ಹೇಳಿಕೆಯಾಗಿದೆ.
ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆದಿಲ್ಲ. ಎತ್ತಿನಹೊಳೆಯ ನೀರಿನ ಹರಿವಿಕೆಯನ್ನು ಬದಲಿಸಿದರೆ ಪಶ್ಚಿಮ ಘಟ್ಟಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಅರ್ಜಿದಾರರ ವಾದವಾಗಿದೆ.
ಕಳೆದ 5 ವರ್ಷಗಳಿಂದ ತೀರ್ಪು ವಿಳಂಬವಾಗುತ್ತಿದ್ದು, ನಾಳಿನ ತೀರ್ಪಿಗಾಗಿ ಕರಾವಳಿಗರು ಹಾಗೂ ಮಲೆನಾಡಿನ ಜನರು ಕುತೂಹಲದಿಂದ ಕಾದು ಕುಳಿತ್ತಿದ್ದಾರೆ.