ವಿಟ್ಲ, ನ 22 : ಪ್ರಯಾಣಿಕರಿದ್ದ ಟಾಟಾ ಏಸ್ ರಿಕ್ಷಾವೊಂದು 20 ಅಡಿ ಆಳದ ಪ್ರಪಾತಕ್ಕೆ ಉರುಳಿದ ಪರಿಣಾಮ 5 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಕಲ್ಲಡ್ಕ-ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಉಕ್ಕುಡ ಪಡಿಬಾಗಿಲು ಜಂಕ್ಷನ್ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಮುಳಿಯ ಮೂಲದ ವಿಶ್ವನಾಥ ಎಂಬವರು ಚಲಾಯಿಸುತ್ತಿದ್ದ ರಿಕ್ಷಾದಲ್ಲಿ ಸುಮಾರು 6 ಮಂದಿ ಪ್ರಯಾಣಿಕರಿದ್ದರು. ಪಡಿಬಾಗಿಲು ಜಂಕ್ಷನ್ನಲ್ಲಿ ಮಹಿಳೆಯೊಬ್ಬರು ಅಂಗಡಿಯಿಂದ ಸಾಮಾನು ಖರೀದಿಗೆಂದು ನಿಲ್ಲಿಸಿಲು ಹೇಳಿದ್ದರು. ಚಾಲಕನೂ ರಿಕ್ಷಾದಿಂದ ಇಳಿದು ಹೋದ ಸಮಯದಲ್ಲಿ ಇದ್ದಕ್ಕಿಂದಂತೆ ಚಲಿಸಿದ ರಿಕ್ಷಾ ರಸ್ತೆ ಬದಿಯ ತಡೆಗೋಡೆಯಿಂದ ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿದೆ. ಈ ಸಂದರ್ಭ ಮೈರ ನಿವಾಸಿ ವಿಶ್ವನಾಥ್ ರಿಕ್ಷಾದಿಂದ ಜಿಗಿದು ಬಚಾವಾಗಿದ್ದಾರೆ. ನಿಕ್ಕಿತಪುಣಿ ಪ್ರಣಮ್ಯ, ಎರುಂಬು ಈಶ್ವರ ಮೂಲ್ಯ, ಎರುಂಬು ರತ್ನ ಸೇರಿ ಇನ್ನೊಬ್ಬರಿಗೆ ಗಂಭೀರ ಗಾಯವಾಗಿದೆ. ಪ್ರಪಾತದಲ್ಲಿ ಚರಂಡಿ ಒಳಗೆ ಸಿಲುಕಿದ್ದ ಜನರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲೆತ್ತಿದ್ದಾರೆ. ಗಾಯಾಳುಗಳಿಗೆ ವಿಟ್ಲದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.