ಮೂಡುಬಿದಿರೆ, ಮೇ 13 (Daijiworld News/SM): ತನ್ನ ಅಪ್ರಾಪ್ತೆ ಮಲಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಬಾಲಕಿಯೋರ್ವಳ ತಂದೆ ಪೊಕ್ಸೊ ಪ್ರಕರಣದಲ್ಲಿ ಪೊಲೀಸರ ವಶವಾದ ಘಟನೆ ಮೂಡುಬಿದಿರೆ ಬೆಳುವಾಯಿಯಲ್ಲಿ ನಡೆದಿದೆ. ಮಂಗಳೂರಿನ ಪಾಂಡೇಶ್ವರದ ರಂಜಿತ್ ಪೂಜಾರಿ(32) ಬಂಧಿತ ವ್ಯಕ್ತಿ.
ಮೂಡುಬಿದಿರೆ ಬೆಳುವಾಯಿ ಮೂಲದ ಮಹಿಳೆಯೋರ್ವರ ಪತಿ ಮೃತಪಟ್ಟಿದ್ದು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಮಹಿಳೆಯನ್ನು ಬಳಿಕ ರಂಜಿತ್ ಪೂಜಾರಿ ವಿವಾಹವಾಗಿದ್ದ. ಆಗಾಗ್ಗೆ ಬೆಳುವಾಯಿಯ ತನ್ನ ಪತ್ನಿ ಮನೆಗೆ ಬಂದು ಹೋಗುತ್ತಿದ್ದರು. ಕಳೆದ ಗುರುವಾರ ಬೆಳುವಾಯಿಯಲ್ಲಿ ಪತ್ನಿ ಮನೆಗೆ ಬಂದಿದ್ದ ರಂಜಿತ್ ತನ್ನ ಅಪ್ರಾಪ್ತೆ ಮಲಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದನ್ನು ಗಮನಿಸಿದ ಆಕೆಯ ತಾಯಿ ಆತನ ಕೃತ್ಯವನ್ನು ಆಕ್ಷೇಪಿಸಿದ್ದಾರೆ.
ಘಟನೆಯ ಬಗ್ಗೆ ಬಾಲಕಿಯೇ ಆರೋಪಿ ವಿರುದ್ಧ ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಸಲಹಾ ಕೇಂದ್ರದಿಂದ ಅಲ್ಲಿನ ಕಾರ್ಯಕರ್ತೆಯರು ಬಂದು ಬಾಲಕಿಯನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯ ತಾಯಿ ಪೋಲೀಸರಿಗೆ ನೀಡಿದ ದೂರಿನಂತೆ ಆರೋಪಿ ರಂಜಿತ್ ಪೂಜಾರಿಯನ್ನು ಪೊಕ್ಸೊ ಕಾಯ್ದೆಯ ಅನ್ವಯ ಬಂಧಿಸಿದ್ದಾರೆ.
ಆರೋಪಿಯನ್ನು ರವಿವಾರ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.