ಬೆಳ್ತಂಗಡಿ,ಮೇ13(DaijiworldNews/AZM):ಟ್ರಂಬೋಸೈಟೋಫೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಶ್ರುತಿ ಶೆಟ್ಟಿ ಎಂಬವರ ಚಿಕಿತ್ಸೆಗಾಗಿ ಸಾಮಾಜಿಕ ಸಂಸ್ಥೆ ರಾಜಕೇಸರಿ ಸಹಾಯಹಸ್ತ ಚಾಚಿದೆ.
ಕಡುಬಡುತನದಿಂದ ಕೂಡಿರುವ ಮುಂಡಾಜೆ ಗ್ರಾಮದ ಶ್ರುತಿ ಶೆಟ್ಟಿ ಎಂಬವರು ಟ್ರಂಬೋಸೈಟೋಫೇನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೂ ಹಣವಿಲ್ಲದೆ ಕಂಗಾಲಾಗಿದ್ದರು. ಇಂತಹ ಒಂದು ಬಡಕುಟುಂಬಕ್ಕೆ ರಾಜಕೇಸರಿ ಎಂಬ ಸಾಮಾಜಿಕ ಸಂಸ್ಥೆ ಸಹಾಯಹಸ್ತ ಚಾಚಿದೆ.
ಕಷ್ಟದಿಂದ ಸಿಲುಕಿದ ಕುಟುಂಬ ಚಿಕಿತ್ಸೆಗಾಗಿ ದಾನಿಗಳ ಮೊರೆ ಹೋದಾಗ, ಶ್ರುತಿಯ ಚಿಕಿತ್ಸೆಗೆ ನೆರವಾಗಲು ಸಾಮಾಜಿಕ ಸಂಸ್ಥೆ ರಾಜಕೇಸರಿ ಬೆಳ್ತಂಗಡಿ ಮುಂದಾಯಿತು. ಭಾನುವಾರದಂದು ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ೧೦ರೂಪಾಯಿಯ ನೀರಿನ ಬಾಟಲ್ ಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ ಲಾಭದ ಹಣವನ್ನು ಶ್ರುತಿ ಶೆಟ್ಟಿ ಎಂಬವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿನೂತನ ರೀತಿಯಲ್ಲಿ ಹಣ ಸಂಗ್ರಹಿಸಿ ನೆರವಾಗಲು ಮುಂದಾದ ರಾಜಕೇಸರಿ ತಂಡಕ್ಕೆ ಎಲ್ಲೆಡೆಯಿಂದಲು ಮೆಚ್ಚುಗೆಯ ಮಹಪೂರವೆ ಹರಿದು ಬರುತ್ತಿದೆ.