ಮಂಗಳೂರು,ಮೇ13(DaijiworldNews/AZM): ನಗರದ ಸ್ಟೇಟ್'ಬ್ಯಾಂಕ್ ಬಳಿಯ ಪಾರ್ಕಿನಲ್ಲಿ ಮೇ 07ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಇಂದು ಬಂಧಿಸಿದ್ದಾರೆ.
ನಗರದ ಬಳ್ಳಾಲ್ಬಾಗ್ ಸಮೀಪದ ವಿವೇಕನಗರ ನಿವಾಸಿ ಶರತ್ (30) ಎಂಬವರನ್ನು ಕಳೆದ ವಾರ ಸ್ಟೇಟ್ಬ್ಯಾಂಕ್ ಬಳಿಯ ಪಾರ್ಕ್ವೊಂದರಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದು ಆರೋಪಿ ಪರಾರಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಟೀಲು ಸಮೀಪದ ಲಿಂಗಪ್ಪ (38) ಎಂದು ಗುರುತಿಸಲಾಗಿದೆ. ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕುಡಿದ ಮತ್ತಿನಲ್ಲಿ ಆರೋಪಿಯು ಈ ಕೃತ್ಯ ಎಸಗಿದ್ದು, ಇದರಲ್ಲಿ ಇತರ ಕೆಲವರು ಶಾಮೀಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಕುಡಿದ ಮತ್ತಿನಲ್ಲಿ ಆರೋಪಿಗಳು ಕಲ್ಲಿನಿಂದ ಜಜ್ಜಿ, ಮುಖದ ಗುರುತು ಸಿಗದಂತೆ ಮಾಡಿ, ಮೃತದೇಹದ ಮೇಲೆ ಸಿಮೆಂಟ್ ಸ್ಲ್ಯಾಬೊಂದನ್ನು ಇರಿಸಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.