ಮಂಗಳೂರು, ಮೇ13(Daijiworld News/SS): ಪವಿತ್ರ ರಂಜಾನ್ ತಿಂಗಳ 7ನೇ ದಿನ ವಿಧಿಬದ್ಧವಾಗಿ ಅನುಸರಿಸಿದ ಕಠಿಣ ಉಪವಾಸವನ್ನು ಸಚಿವ ಯುಟಿ ಖಾದರ್ ತನ್ನ ಗೆಳೆಯನ (ಲಿಂಗಾಯತ) ಮನೆಯಲ್ಲಿ ತೊರೆದು, ಅಲ್ಲಿಯೇ ನಮಾಝ್ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.
ಸಚಿವ ಯುಟಿ ಖಾದರ್ ಕುಂದಗೋಳ ಉಪಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಉಪವಾಸ ತೊರೆಯಲು ಸಮಯವಾಗಿದ್ದರಿಂದ ಅಲ್ಲಿನ ಲಿಂಗಾಯತ ಮುಖಂಡ ಸಾಮಾಜಿಕ ಕಾರ್ಯಕರ್ತರಾದ ಗಂಗಾಧರ ಕುನ್ನೂರು ತನ್ನ ಮನೆಯಲ್ಲಿಯೇ ಉಪವಾಸ ತೊರೆಯಲು ಸಚಿವರಿಗೆ ವ್ಯವಸ್ಥೆ ಮಾಡಿಕೊಟ್ಟರು. ಈ ವೇಳೆ ಸರಳತೆಯನ್ನು ಮೈಗೂಡಿಸಿಕೊಂಡ ಖಾದರ್ ಸಂತೋಷದಿಂದ ಇದಕ್ಕೆ ಒಪ್ಪಿ ಗೆಳೆಯನ ಮನೆಯಲ್ಲಿಯೇ ಉಪವಾಸ ತೊರೆದಿದ್ದಾರೆ. ಬಳಿಕ ನಮಾಝ್ ಮಾಡಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಾರೆ.
ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿಗೆ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ಸಮಾಜದಲ್ಲಿ ಅದೆಷ್ಟೇ ಕೋಮು ಗಲಭೆಗಳು ನಡೆದರೂ ಹಿಂದೂ ಮತ್ತು ಮುಸ್ಲಿಮರ ನಡುವೆ ಪ್ರೀತಿ ಇದೆ. ಇಲ್ಲಿ ಶೇ.10ರಷ್ಟು ಜನ ದ್ವೇಷಿಸುವವರು ಇದ್ದರೆ, ಶೇ.90ರಷ್ಟು ಜನ ಪ್ರೀತಿಸುವವರು ಇದ್ದಾರೆ. ಸಮಾಜದಲ್ಲಿರುವ ಕೆಲ ಕಿಡಿಗೇಡಿಗಳು ಹಿಂದೂ - ಮುಸ್ಲಿಮರ ನಡುವೆ ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಮರು ಅನ್ಯೋನ್ಯತೆಯಿಂದಲೇ ಇದ್ದಾರೆ ಎಂದು ಹೇಳಿದರು.
ಪವಿತ್ರ ರಂಜಾನ್ ತಿಂಗಳ ಉಪವಾಸದಲ್ಲಿ ದೇವರನ್ನು ಒಲಿಸಿಕೊಳ್ಳುವ ಶಕ್ತಿ ಇದೆ. ಎಲ್ಲರು ಸಹೋದರ ಭಾವದಿಂದ ಬದುಕಬೇಕು. ವಿಶ್ವದ ವಿವಿಧ ರಾಷ್ಟ್ರಗಳು ದ್ವೇಷ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ನಿತ್ಯ ಸಾವು ನೋವು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ದೇಶದ ಜನತೆ ಜಾತಿಬೇಧ ತೊರೆದು, ಎಲ್ಲ ಧರ್ಮಿಯರು ಭಾವೈಕ್ಯದಿಂದ ಬದುಕು ಸಾಗಿಸಬೇಕು ಎಂದು ತಿಳಿಸಿದರು.
ಹಿಂದೂ ಮತ್ತು ಮುಸ್ಲಿಮರ ಪವಿತ್ರ ಧರ್ಮ ಗ್ರಂಥಗಳಾದ ಕುರಾನ್ ಮತ್ತು ಭಗವದ್ಗೀತೆಯಲ್ಲಿ ತಮ್ಮ ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮವನ್ನು ದ್ವೇಷಿಸಬೇಕು ಎಂದು ಬರೆದಿಲ್ಲ. ಬೇರೆ ಧರ್ಮವನ್ನು ನೋಯಿಸಬೇಕು ಎಂದು ಯಾವ ಧರ್ಮ ಗ್ರಂಥವೂ ಹೇಳಿಕೊಟ್ಟಿಲ್ಲ. ಹೀಗಾಗಿ ಧರ್ಮ ಮತ್ತು ಜಾತಿಯಿಂದ ದೇಶ ಒಡೆಯುವ ಕೆಲಸವಾಗಬಾರದು ಎಂದು ಹೇಳಿದರು.