ಉಡುಪಿ, ಮೇ13(Daijiworld News/SS): ಸುವರ್ಣ ತ್ರಿಭುಜ ಬೋಟ್ನಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ಮೀನುಗಾರರು ನಾಪತ್ತೆಯಾಗಿದ್ದು, ಈ ಏಳು ಮಂದಿ ಸಂತ್ರಸ್ತ ಮೀನುಗಾರರ ಕುಟುಂಬದವರು ರಾಜ್ಯ ಸರಕಾರ ಘೋಷಣೆ ಮಾಡಿರುವ ಪರಿಹಾರ ಧನವನ್ನು ಪಡೆಯಲು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂತ್ರಸ್ತ ಕುಟುಂಬದವರು ಯಾರು ಕೂಡ ಪರಿಹಾರ ಬೇಡ ಎಂದು ನಿರಾಕರಿಸಿಲ್ಲ. ಮೇ 16ರಂದು ದೆಹಲಿಯಿಂದ ವಾಪಾಸ್ಸಾದ ಬಳಿಕ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ನಾಪತ್ತೆ ಪ್ರಕರಣದಲ್ಲಿ ಕುಟುಂಬದವರು ಅರ್ಜಿ ಸಲ್ಲಿಸದೆ ಹಾಗೂ ಬಾಂಡ್ಗೆ ಸಹಿ ಹಾಕದೆ ಪರಿಹಾರ ಮೊತ್ತ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ತಿಳಿಸಿದ್ದಾರೆ.
ರಾಜ್ಯ ಸರಕಾರ ಘೋಷಿಸಿರುವ ಪರಿಹಾರದ ಹಣವನ್ನು ಪಡೆಯಲು ನಿರಾಕರಿಸಿರುವ ಕುರಿತು ಹರಡುತ್ತಿರುವ ಸುದ್ದಿಯನ್ನು ಕುಟುಂಬಸ್ಥರು ಅಲ್ಲಗಳೆದಿದ್ದಾರೆ. ಪರಿಹಾರದ ಮೊತ್ತಕ್ಕಾಗಿ ಸಂಬಂಧಪಟ್ಟ ದಾಖಲೆಗಳಿಗೆ ಸಹಿ ಹಾಕಲು ಮೇ 16ರ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಕುಟುಂಬಗಳು ಈ ಹಿಂದೆ ತೀರ್ಮಾನ ಮಾಡಿತ್ತು.
ಆದರೆ ಇದೀಗ ತೆಗೆದುಕೊಂಡ ಒಮ್ಮತದ ನಿರ್ಧಾರದಂತೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. ಪರಿಹಾರಕ್ಕಾಗಿ ಮೇ 13ರಂದು ಇಂಡೆಮ್ನಿಟಿ ಬಾಂಡ್ಗೆ ಸಹಿ ಮತ್ತು ಇತರ ಅಗತ್ಯ ದಾಖಲಾತಿಗಳನ್ನು ಸಲ್ಲಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಾತ್ರವಲ್ಲ, ಮೇ 16ರಂದು ಮೀನುಗಾರರ ಸಂಘ, ಜನಪ್ರತಿನಿಧಿಗಳೊಂದಿಗೆ ಕುಟುಂಬಸ್ಥರು ದೆಹಲಿಗೆ ತೆರಳಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲಿ ಬೋಟು ಅವಘಡಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಸಚಿವರನ್ನು ಒತ್ತಾಯಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.