ನಾಸಿಕ್: ಉತ್ತರ ಪ್ರದೇಶದ ಆಸ್ಪತ್ರೆಗಳಲ್ಲಿ ನವಜಾತಶಿಶುಗಳ ಸಾವಿನ ಸುದ್ದಿ ದೇಶವನ್ನು ಬೆಚ್ಚಿಬೀಳಿಸಿ ತಿಂಗಳುಗಳು ಕಳೆಯುವ ಮೊದಲೇ ಮಹಾರಾಷ್ಟ್ರದಲ್ಲೂ ಇಂತದ್ದೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ನಾಸಿಕ್ ನ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯ ಕೊರತೆಯಿಂದ 55 ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಆಗಸ್ಟ್ ತಿಂಗಳಲ್ಲಿ 350 ಮಕ್ಕಳನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವುಗಳ ಪೈಕಿ 55 ಮಕ್ಕಳು ಆಮ್ಲಜನಕದ ಕೊರತೆಯಿಂದ ಮತ್ತು ಇತರ ಔಷಧಿಗಳ ಪೂರೈಕೆಯ ಕೊರತೆಯಿಂದ ಸಾವನ್ನಪ್ಪಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಆಮ್ಲಜನಕ ಪೂರೈಕೆಯ ಕೊರತೆಯಿಂದ 70 ಮಕ್ಕಳು ಸಾವನ್ನಪ್ಪಿದ ಬೆನ್ನಿಗೇ ಇಲ್ಲಿನ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 45 ಮಕ್ಕಳು ಅಗತ್ಯ ಔಷಧಿಗಳ ಪೂರೈಕೆ ಮತ್ತು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದರು.
ಇದೀಗ ನಾಸಿಕ್ ನಲ್ಲಿ ನಡೆದಿರುವ ಮಕ್ಕಳ ಸಾವು ದೇಶದಲ್ಲಿ ವೈದ್ಯಕೀಯ ಸವಲತ್ತುಗಳು ಜನಸಾಮಾನ್ಯರನ್ನು ಎಷ್ಟರ ಮಟ್ಟಿಗೆ ತಲುಪುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ. ಜೊತೆಗೆ ಸರಕಾರಿ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆಯೂ ಅನುಮಾನಗಳನ್ನು ಮೂಡಿಸಿದೆ.