ರಾಸಲೀಲೆ ಸಿಡಿ' ಪ್ರಕರಣದಲ್ಲಿ ಕೆಲವು ಕಾಲದಿಂದ ನಿರಾಳವಾಗಿದ್ದ ನಿತ್ಯಾನಂದ ಸ್ವಾಮಿಗೆ ಈಗ ಮತ್ತೆ ಸಂಕಷ್ಟ ಶುರುವಾಗಿದೆ. ರಾಸಲೀಲೆ ಸಿಡಿಯಲ್ಲಿ ನಟಿ ರಂಜಿತಾ ಜೊತೆ ಚಕ್ಕಂದದಲ್ಲಿ ತೊಡಗಿರುವುದು ನಿತ್ಯಾನಂದಸ್ವಾಮಿಯೇ ಎಂದು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ ಖಚಿತ ಪಡಿಸಿದೆ.
ಸಿಡಿಯಲ್ಲಿರುವುದು ನಾನಲ್ಲ, ಅದು ತಿರುಚಿದ ಸಿಡಿ ಎಂದು ನಿತ್ಯಾನಂದ ಆರೋಪಿಸಿದ್ದ, ತದನಂತರ ಮಾಧ್ಯಮಗಳ ವಿರುದ್ಧವೂ ತಿರುಗಿಬಿದ್ದಿದ್ದ. ಪ್ರಕರಣದಲ್ಲಿ ಹೈಡ್ರಾಮಾವೇ ನಡೆದಿತ್ತು. ಇದೀಗ ಕೊನೆಗೂ ಎಫ್ಎಸ್ ಎಲ್ ವರದಿ ರಾಸಲೀಲೆ ಸಿಡಿಯಲ್ಲಿದ್ದ ನಿತ್ಯಾನಂದನ ಬಂಡವಾಳ ಏಳು ವರ್ಷಗಳ ಬಳಿಕ ಬಯಲು ಮಾಡಿದೆ.
2010ರಲ್ಲಿ ನಿತ್ಯಾನಂದ ಚಿತ್ರನಟಿಯೊಬ್ಬಳ ಜತೆ ರಾಸಲೀಲೆಯಲ್ಲಿ ತೊಡಗಿದ್ದ ಸಿಡಿ ಲೆನಿನ್ ಮೂಲಕ ಮಾಧ್ಯಮಗಳಿಗೆ ತಲುಪುವ ಮೂಲಕ ದೇಶಾದ್ಯಂತ ವಿವಾದವನ್ನೇ ಸೃಷ್ಟಿಸಿತ್ತು. ಸ್ವಾಮಿ ಕೂಡ ಸುದ್ದಿ ಪ್ರಸಾರವಾದ ನಂತರ ನಾಪತ್ತೆಯಾಗಿದ್ದ. ನಿತ್ಯಾನಂದ ವಿರುದ್ಧ ಆರತಿ ರಾವ್ ಎಂಬವರು ಕೂಡಾ ದೂರು ದಾಖಲಿಸಿದ್ದರು.
ನಿತ್ಯಾನಂದನ ರಾಸಲೀಲೆ ವಿರುದ್ಧ ನಿತ್ಯ ಧರ್ಮಾನಂದಾ ಅಲಿಯಾಸ್ ಲೆನಿನ್ ಕರುಪ್ಪನ್ ತಮಿಳುನಾಡಿನಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ವಿಚಾರಣೆಯನ್ನು ತಮಿಳುನಾಡು ಪೊಲೀಸರು ರಾಮನಗರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಬಿಡದಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು. 2010ರಲ್ಲಿ ಸಿಐಡಿ ಸಿಡಿಯನ್ನು ದೆಹಲಿಯಲ್ಲಿ ಎಫ್ಎಸ್ ಎಲ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು.