ಮಂಗಳೂರು, ಮೇ 13 (Daijiworld News/SM): ಮೂಲತಃ ಪೊಳಲಿ ಮೊಗರು ನಿವಾಸಿ, ಮಂಗಳೂರು ನಗರದ ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ಬಳಿಕ ನಾಪತ್ತೆಯಾಗಿದ್ದ ಮಹಿಳೆಯ ವಾಹನ ನಗರದ ನಾಗುರಿಯಲ್ಲಿ ಪತ್ತೆಯಾಗಿದೆ.
ಪ್ರಕರಣ ನಡೆದ ಬಳಿಕ ಪೊಲೀಸರು ವಾಹನ ಹಾಗೂ ಆರೋಪಿಗಳ ಪತ್ತೆಗೆ ನಿರಂತರವಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅಲ್ಲದೆ ನಾಗುರಿಯಲ್ಲಿ ಸ್ಥಳೀಯರಿಗೆ ವಾಹನದ ಬಗ್ಗೆ ಮಾಹಿತಿ ಇದೆಯಾ ಎಂಬುವುದಾಗಿ ದ್ವಿಚಕ್ರ ವಾಹನದ ನಂಬರನ್ನು ಪೊಲೀಸರು ನೀಡಿದ್ದರು. ಅದರಂತೆ ಸ್ಥಳೀಯರು ಪೊಲೀಸರ ಕಾರ್ಯಾಚರಣೆಗೆ ನೆರವಾಗಿದ್ದಾರೆ. ಹಾಗೂ ನಾಗುರಿಯಲ್ಲಿರುವ ಕಾರಿನ ಗ್ಯಾರೇಜೊಂದರ ಮುಂಭಾಗದಲ್ಲಿ ಈ ದ್ವಿಚಕ್ರ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಕೆಎ 19 ಇಯು 5983 ನೋಂದಣಿಯ ದ್ವಿಚಕ್ರ ವಾಹನ ಇದಾಗಿದೆ. ಹತ್ಯೆಕೋರರು ಶ್ರೀಮತಿಯವರನ್ನು ಹತ್ಯೆಗೈದು ಬಳಿಕ ದ್ವಿಚಕ್ರ ವಾಹನವನ್ನು ನಾಗುರಿ ಪ್ರದೇಶದಲ್ಲಿರಿಸಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
ಪ್ರಕರಣ ನಡೆದ ಬಳಿಕ ಪೊಲೀಸರು ವಾಹನ ಹಾಗೂ ಆರೋಪಿಗಳ ಪತ್ತೆಗೆ ನಿರಂತರವಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇದೀಗ ಮಹಿಳೆ ಬಳಸುತ್ತಿದ್ದ ದ್ವಿಚಕ್ರವಾಹನ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರವಿವಾರದಂದು ದುಷ್ಕರ್ಮಿಗಳು ಶ್ರೀಮತಿ ಶೆಟ್ಟಿಯವರನ್ನು ಬರ್ಬರವಾಗಿ ಹತ್ಯೆ ನಡೆಸಿದ್ದರು. ದುಷ್ಕರ್ಮಿಗಳು ರುಂಡವನ್ನು ಕದ್ರಿ ಬಳಿ ಗೋಣಿ ಚೀಲದಲ್ಲಿ ಇರಿಸಿ ಹೋಗಿದ್ದರೆ, ಉಳಿದ ಅಂಗಾಂಗಗಳನ್ನು ನಂದಿಗುಡ್ಡ ಸಮೀಪ ಎಸೆದು ಹೋಗಿದ್ದರು.
ಪೊಲೀಸರು ಪರಿಶೀಲಿಸಿದಾಗ ಮೃತದೇಹವಷ್ಟೇ ಪತ್ತೆಯಾಗಿತ್ತು. ಆದರೆ ಇನ್ನೂ ದೇಹದ ಕಾಲುಗಳು ಪತ್ತೆಯಾಗಿಲ್ಲ. ಅತ್ಯಂತ ನಿಗೂಢ ರೀತಿಯಲ್ಲಿರುವ ಈ ಪ್ರಕರಣವನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿದ್ದು, ವಿವಿಧ ಆಯಾಮಗಳಲ್ಲಿ ಇದೀಗ ತನಿಖೆ ನಡೆಸಲಾಗುತ್ತಿದೆ. ಯಾರು ಹಾಗೂ ಯಾವ ಕಾರಣಕ್ಕೆ ಹತ್ಯೆ ನಡೆಸಿದ್ದಾರೆ ಎನ್ನುವುದು ಸದ್ಯ ಕುತೂಹಲವನ್ನುಂಟು ಮಾಡಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ತನಿಖೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದು, ಸಿಸಿ ಕ್ಯಾಮೆರಾಗಳ ತಪಾಸಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.