ಬಂಟ್ವಾಳ, ಮೇ 13 (Daijiworld News/SM): ವಾಹನಕ್ಕೆ ಸೈಡ್ ಕೊಡುವ ಸಂದರ್ಭ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ ಎಂಬ ಕಾರಣಕ್ಕೆ ಆಕ್ರೋಶಿತ ಗುಂಪೊಂದು ಕಾರು ಪುಡಿಗೈದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ನಡೆದಿದೆ.
ಘಟನೆಯ ಬಳಿಕ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿದೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಸೈಡ್ ಕೊಡುವ ಸಂದರ್ಭ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಇನ್ನು ಘಟನೆಯಲ್ಲಿ ದ್ವಿಚಕ್ರವಾಹನ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ದ್ವಿಚಕ್ರವಾಹನದ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನಲ್ಲಿದ್ದ ಯುವಕರು ಮಂಗಳೂರು ಮೂಲದವರಾಗಿದ್ದು, ಈ ಯುವಕರ ತಂಡ ಅಪಘಾತ ವೆಸಗಿದ ಕಾರನ್ನು ಸ್ಥಳೀಯರು ರಾಡ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸಿ ಪುಡಿಗೈದಿದ್ದಾರೆ.
ಕಾರನ್ನು ಪುಡಿ ಮಾಡುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯ ಯುವಕರ ಹಾಗೂ ಮಂಗಳೂರು ಮೂಲದ ಯುವಕರ ಮಧ್ಯೆ ಘರ್ಷಣೆ ನಡೆದಿದ್ದು ಕಲ್ಲು ತೂರಾಟ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಓರ್ವ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಪುಡಿ ಮಾಡಿದ ಯುವಕರು ಕಾರನ್ನು ಬಿಟ್ಟುಪರಾರಿಯಾಗಿದ್ದಾರೆ.
ಸ್ಥಳಕ್ಕೆ ವಿಟ್ಲ ಪೋಲೀಸರು ಭೇಟಿ ನೀಡಿದ್ದು, ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.